ತಲೈವಾ ಜತೆ ಮತ್ತೆ ನಯನ ದರ್ಬಾರ್

nayana 2020
Published on

ಕೆಲವು ದಿನಗಳ ಹಿಂದೆ ಅಬ್ಬರದಿಂದಲೇ ಆಗಮಿಸಿ ತೆರೆ ಮೇಲೆ ದರ್ಬಾರ್ ತೋರಿದ್ದ ಲೇಡಿ ಸೂಪರ್​ಸ್ಟಾರ್ ನಯನತಾರಾ ಸದ್ಯ ಮತ್ತೊಂದು

ದರ್ಬಾರ್​ಗೆ ಮುಂದಾಗಿದ್ದಾರೆ. ಅದು ಕೂಡ ಸೂಪರ್​ಸ್ಟಾರ್ ರಜನಿಕಾಂತ್ ಜತೆಗೆ ಎಂಬುವುದು ವಿಶೇಷ. ಹೌದು, ಇತ್ತೀಚೆಗಷ್ಟೇ ತೆರೆ ಕಂಡಿದ್ದ ‘ದರ್ಬಾರ್’ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಗೆ ಜತೆಯಾಗಿ ಕಾಣಿಸಿಕೊಂಡಿದ್ದ ಈ ಸುಂದರಿ, ಮತ್ತೊಮ್ಮೆ ರಜನಿಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ರಜನಿಕಾಂತ್ ಅಭಿನಯದ ‘ತಲೈವಾ 168’ ಚಿತ್ರದಲ್ಲಿ ನಯನತಾರಾ ನಾಯಕಿ ಆಗಿ ಮಿಂಚಲಿರುವ ಮಾಹಿತಿಯನ್ನು ಚಿತ್ರತಂಡವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದರಿಂದ ಈ ಮಾಹಿತಿ ಗಾಸಿಪ್ ಅಲ್ಲ ಎಂಬುದೂ ಖಚಿತವಾಗಿದೆ.

ಹಿಟ್ ಸಿನಿಮಾ ‘ವಿಶ್ವಾಸಂ’ಗೆ ಆಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಶಿವ, ‘ಸನ್ ಪಿಕ್ಚರ್ಸ್’ ಬ್ಯಾನರ್ ಅಡಿ ನಿರ್ಮಾಣ ಆಗಲಿರುವ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಖುಷ್ಬೂ ನಾಯಕಿ ಆಗಿ ಕಾಣಿಸಿಕೊಂಡು ರಜನಿ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಖುಷ್ಬೂ ಜಾಗವನ್ನು ನಯನತಾರಾ ತುಂಬಿದ್ದಾರೆ. ಆದರೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಖುಷ್ಬೂ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಕೀರ್ತಿ ಸುರೇಶ್, ಮೀನಾ, ಪ್ರಕಾಶ್ ರಾಜ್, ಸೂರಿ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಕೀರ್ತಿ ಸುರೇಶ್ ಅವರದ್ದು ವಿಭಿನ್ನ ಪಾತ್ರವಂತೆ. ಕಥಾನಾಯಕನ ಪುತ್ರಿಯ ಪಾತ್ರದಲ್ಲಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.

ಎಮೋಷನಲ್, ಫ್ಯಾಮಿಲಿ ಎಂಟರ್​ಟೇನ್​ವೆುಂಟ್ ಕಥೆ ಒಳಗೊಂಡ ಈ ಚಿತ್ರ ಇದೇ ತಿಂಗಳಲ್ಲೇ ಸೆಟ್ಟೇರಲಿದ್ದು, ವರ್ಷದ ಕೊನೆಗೆ ತೆರೆಕಾಣುವ ಸಾಧ್ಯತೆ ಇದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net