ನಟಿ ನಯನತಾರ ಬಾಡಿಗೆ ತಾಯ್ತನ ಪ್ರಕರಣ: ತಮಿಳುನಾಡು ಸರ್ಕಾರದ ತನಿಖೆಯಲ್ಲಿ ಮಹತ್ವದ ಮಾಹಿತಿ ಬಯಲು

Nayanatara
Published on

ಚೆನ್ನೈ: ನಟಿ ನಯನತಾರ ಅವರ ಬಾಡಿಗೆ ತಾಯ್ತನ ಪ್ರಕರಣಕ್ಕೆ ಬ್ರೇಕ್​ ಬಿದ್ದಿದೆ. ನಯನತಾರ ಮತ್ತು ಪತಿ ವಿಘ್ನೇಶ್​ ಶಿವನ್​ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್​) ಮಾರ್ಗಸೂಚಿಗಳ ಪ್ರಕಾರವೇ ಮಗುವನ್ನು ಪಡೆದಿದ್ದಾರೆ ಎಂದು ತಮಿಳುನಾಡು ಸರ್ಕಾರ ರಚಿಸಿದ್ದ ತನಿಖಾ ಸಮಿತಿಯು ವರದಿ ನೀಡಿದೆ.

ಕಳೆದ ಜೂನ್​ 9ರಂದು ಮದುವೆಯಾದ ತಾರಾಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗಿತ್ತು. ಬಳಿಕ ಬಾಡಿಗೆ ತಾಯ್ತನ ಮೂಲಕ ಮಗು ಪಡೆದಿದ್ದಾರೆ ಎಂಬ ಸುದ್ದಿಯಾಗುತ್ತಲೇ, ಬಾಡಿಗೆ ತಾಯ್ತನದ ನಿಯಮಗಳನ್ನು ತಾರಾದಂಪತಿ ಗಾಳಿಗೆ ತೂರಿದ್ದಾರೆ ಎಂಬ ವಿವಾದ ಸೃಷ್ಟಿಯಾಯಿತು.

ವಿವಾದದ ಬೆನ್ನಲ್ಲೇ ದಂಪತಿ ವಿರುದ್ಧ ದೂರು ಸಹ ದಾಖಲಾಗಿಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಮಿಳುನಾಡು ಸರ್ಕಾರ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತು. ತಮಿಳುನಾಡಿನ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯು ತನಿಖೆ ನಡೆಸಿತು.

ಇದೀಗ ಈ ಪ್ರಕರಣಕ್ಕೆ ಅಂತಿಮ ಮುದ್ರೆ ಬಿದ್ದಿದ್ದು, ಇಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನಯನತಾರ ಮತ್ತು ವಿಘ್ನೇಶ್​ ಶಿವನ್​ ಕಾನೂನುಬದ್ಧವಾದ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ದಂಪತಿ ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್​ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ಹೇಳಲಾಗಿದೆ. ಇದಿಷ್ಟೇ ಅಲ್ಲದೆ, 2021ರಲ್ಲೇ ಬಾಡಿಗೆ ತಾಯ್ತನ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಸಲ್ಲಿಸಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೇಳಲಾಗಿದೆ.

ತನಿಖೆಯ ಪ್ರಕಾರ ಬಾಡಿಗೆ ತಾಯಿಯು ನವೆಂಬರ್ 2021ರಲ್ಲಿ ದಂಪತಿಗಳೊಂದಿಗೆ ಒಪ್ಪಂದ ಮಾಡಿಕೊಂಡರು ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಭ್ರೂಣವನ್ನು ಬಾಡಿಗೆ ತಾಯಿಯಲ್ಲಿ ಇರಿಸಲಾಯಿತು ಎಂದು ವರದಿ ಹೇಳುತ್ತದೆ. ಅಕ್ಟೋಬರ್‌ನಲ್ಲಿ ಅವಳಿ ಮಕ್ಕಳು ಜನಿಸಿದರು. ಕಳೆದ ಡಿಸೆಂಬರ್‌ನಲ್ಲಿ ಸರೊಗಸಿ (ನಿಯಂತ್ರಣ) ಕಾಯಿದೆ 2021 ಅನ್ನು ಅಂಗೀಕರಿಸಿದ ನಂತರ ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಯಿತು. ಇದು ಜನವರಿ 2022 ರಲ್ಲಿ ಜಾರಿಗೆ ಬಂದಿತು. ಈ ಘಟನೆಗಳ ಟೈಮ್‌ಲೈನ್‌ನ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಅದು ಕಾನೂನುಬದ್ಧವಾಗಿತ್ತು ಎಂದು ತಿಳಿದುಬಂದಿದೆ.

ಕಳೆದ ಜೂನ್​ 9ರಂದು ಸಾಂಪ್ರದಾಯಿಕವಾಗಿ ಮದುವೆ ನಡೆದಿದ್ದು, 6 ವರ್ಷಗಳ ಹಿಂದೆಯೇ ಇಬ್ಬರು ರಿಜಿಸ್ಟ್ರಾರ್​ ಮದುವೆ ಆಗಿರುವುದಾಗಿ ದಾಖಲೆಗಳು ಹೇಳುತ್ತಿವೆ. ಇದೀಗ ಬಾಡಿಗೆ ತಾಯ್ತನದ ವಿವಾದ ತಾರ್ಕಿಕ ಅಂತ್ಯ ಕಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net