

ಬೆಂಗಳೂರು: ಮೂರು ಗಂಟೆ ಅವಧಿಯ ಪ್ರತಿ ಸಿನಿಮಾಕ್ಕೆ ವಿರಾಮದ ಅವಧಿ ಇದ್ದೇ ಇರುತ್ತದೆ. ಇದನ್ನೇ ಆಧರಿಸಿಕೊಂಡು ದಿನೇಶ್ ಶೆಣೈ ರೂಪಿಸಿರುವ ಕಿರುಚಿತ್ರವೇ ‘ಮಧ್ಯಂತರ’. ಬಿಡುಗಡೆ ಮುನ್ನವೇ ಸಂಚಲನ ಸೃಷ್ಟಿಸಿರುವ ಈ ಚಿತ್ರವು 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ನಾನ್ ಫೀಚರ್ ವಿಭಾಗದಲ್ಲಿ ನಿರ್ದೇಶನಕ್ಕೆ ದಿನೇಶ್ ಶೆಣೈ ಹಾಗೂ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ಪ್ರಶಸ್ತಿ ತಂದುಕೊಟ್ಟಿದೆ. ಇತ್ತೀಚೆಗೆ ‘ಮಧ್ಯಂತರ’ ಕಿರುಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಾಜಿ ಸಚಿವೆ, ನಟಿ, ನಿರ್ಮಾಪಕಿ ಡಾ.ಜಯಮಾಲಾ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿ ಹಲವರು ಕಿರುಚಿತ್ರವನ್ನು ವೀಕ್ಷಿಸಿದರು.
ನಿರ್ದೇಶಕ ದಿನೇಶ್ ಶೆಣೈ, ‘ಈ ಕಥೆ ಹೊಳೆದದ್ದು ಕರೊನಾ ಸಮಯದಲ್ಲಿ. ಮೊದಲು ಕಿರುಚಿತ್ರ ಮಾಡೋಣ, ಅದು ಇಷ್ಟವಾದರೆ ಸಿನಿಮಾ ಮಾಡೋಣ ಎಂಬ ನಿರ್ಧಾರಕ್ಕೆ ಬಂದೆ. ಈ ಕಿರುಚಿತ್ರ ನೋಡಿದ ದಯಾಳ್ ಪದ್ಮನಾಭನ್ ಪನೋರಮಾಗೆ ಕಳುಹಿಸಲು ಸಲಹೆ ನೀಡಿದರು. ಸೆನ್ಸಾರ್ ಮಾಡಿಸಿದರೆ ರಾಷ್ಟ್ರಪ್ರಶಸ್ತಿಗೂ ಕಳುಹಿಸಬಹುದು ಎಂದು ಮತ್ತೊಬ್ಬರು ಹೇಳಿದರು. ಅದೇ ರೀತಿ ಕಳುಹಿಸಲಾಯಿತು. ನಾನ್ ಫೀಚರ್ ವಿಭಾಗದಲ್ಲಿ ‘ಮಧ್ಯಂತರ’ಕ್ಕೆ ಎರಡು ಪ್ರಶಸ್ತಿಗಳು ಬಂದಿವೆ. ಇದು 1976ರಿಂದ 85 ರವರೆಗಿನ ಕಾಲಘಟ್ಟದ ಕಥೆ. ಇದನ್ನು ನೆಗೆಟಿವ್‌ನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಹನ್ನೊಂದು ದಿನಗಳ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಮಾಣಿಕ್‌ಚಂದ್ ಸಂದರ್ಶನದಲ್ಲಿ ಹೇಳಿದ ಮಾತೇ ಈ ಕಿರುಚಿತ್ರಕ್ಕೆ ಸ್ಫೂರ್ತಿ. ಮುಂದಿನ ದಿನಗಳಲ್ಲಿ ಇದೇ ಕಥೆಯನ್ನು ಮುಂದುವರಿಸಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದರು.
ಡಾ. ಜಯಮಾಲಾ, ‘ಇಂತಹ ಅದ್ಭುತ ಕಥೆಯನ್ನು ಕೆಲವೇ ನಿಮಿಷಗಳಲ್ಲಿ ಹೇಳುವುದು ಸುಲಭವಲ್ಲ. ದಿನೇಶ್ ಶೆಣೈ ಆ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದು ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ’ ಎಂದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು " ಮಧ್ಯಂತರ" ತಂಡಕ್ಕೆ ಶುಭಾಶಯ ತಿಳಿಸಿ, ಮುಖ್ಯಮಂತ್ರಿಗಳ ಬಳಿ ಚಿತ್ರರಂಗಕ್ಕೆ ಅನುಕೂಲವಾಗಲಿರುವ ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ರಂಗ ಕಲಾವಿದರಾದ ವೀರೇಶ್, ರಮೇಶ್ ಪಂಡಿತ್ ಈ ಕಿರುಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.