ಮನೆಮನೆಯಲ್ಲೂ ಸದ್ದು ಮಾಡಲಿರುವ 'ಡೊಳ್ಳು'; ಒಟಿಟಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ

Dollu
ಡೊಳ್ಳು ಚಿತ್ರದ ದೃಶ್ಯ
Published on

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಅವರ ಚೊಚ್ಚಲ ನಿರ್ಮಾಣ, ಸಾಗರ್ ಪುರಾಣಿಕ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ 'ಡೊಳ್ಳು' ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದ್ದು, ಅದೀಗ ಮನೆಮನೆಯಲ್ಲೂ ಸದ್ದು ಮಾಡಲಿದೆ. ಅರ್ಥಾತ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ಡೊಳ್ಳು ಒಟಿಟಿಗೆ ಪ್ರವೇಶಿಸಿದೆ.

ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿರುವ 'ಡೊಳ್ಳು' ಸಿನಿಮಾ ಅಮೆಜಾನ್ ಪ್ರೈಮ್​ಗೆ ಪ್ರವೇಶಿಸಿದ್ದು, ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಮನೆಯಲ್ಲೇ ಇಲ್ಲವೇ ಅಂಗೈಯಲ್ಲೇ ಇದನ್ನು ನೋಡಬಹುದಾಗಿದೆ. ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿಟ್ಟುಕೊಂಡು ಹೆಣೆದ ಕಥೆ ಈ ಚಿತ್ರದ ಜೀವಾಳ. ಒಡೆಯರ್ ಮೂವೀಸ್ ಬ್ಯಾನರ್​ನಲ್ಲಿ ನಿರ್ಮಾಣವಾದ ಈ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯುದರೊಂದಿಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಒಳಗೊಂಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಶ್ ಕಲಥಿ ಕ್ಯಾಮೆರಾ ನಿರ್ದೇಶನ, ಬಿ.ಎಸ್.ಕೆಂಪರಾಜು ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net