

ಹೈದರಾಬಾದ್: ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಇದೀಗ ಸದ್ದಿಲ್ಲದೇ ವಿವಾಹವಾಗಿದ್ದಾರೆ. ಈ ಜೋಡಿ ಹೊಸ ವರ್ಷದ ಸಂದರ್ಭದಲ್ಲಿ ವಿಡಿಯೋ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ವಿಡಿಯೋದಲ್ಲಿ ನರೇಶ್ ಮತ್ತು ಪವಿತ್ರಾ ಪರಸ್ಪರ ಚುಂಬಿಸುವ ದೃಶ್ಯವಿತ್ತು. ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮತ್ತೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಇಬ್ಬರ ಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.
ಕೆಲವೇ ಆಪ್ತರ ಸಮ್ಮುಖದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರ ಸಂಬಂಧ ಬಯಲಾಗಿದ್ದು ಹೇಗೆ?
ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ ಬಳಿಕ ಇಬ್ಬರು ಸಂಬಂಧ ಹೊರ ಜಗತ್ತಿಗೆ ಬಯಲಾಯಿತು. ಇದಾದ ಬಳಿಕ ಇದಕ್ಕೆ ಪೂರಕವಾದ ಸಾಕಷ್ಟು ಘಟನೆಗಳು ನಡೆಯಿತು.
ನರೇಶ್ ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ. ನರೇಶ್ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್ ವಿರುದ್ಧ ಆರೋಪ ಮಾಡಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ಜುಲೈ 2ರ ರಾತ್ರಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್ಗೆ ಬಂದು ಜಗಳವಾಡಿದ್ದರು. ಅಲ್ಲದೆ, ಸ್ನೇಹಿತರು ಅಂತಾರೆ ಆದರೆ, ಒಂದೇ ಕೋಣೆಯಲ್ಲಿ ಇಬ್ಬರು ಒಂದು ರಾತ್ರಿ ಉಳಿದುಕೊಂಡಿದ್ದು ಏಕೆ? ಎಂದು ಪ್ರಶ್ನಿಸುವ ಮೂಲಕ ರಮ್ಯಾ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು. (ಏಜೆನ್ಸೀಸ್)