

ಎರಡು ವರ್ಷಗಳೇ ಆಗಿದ್ದವು ನಾಗೇಂದ್ರ ಮಾಗಡಿ ನಿರ್ದೇಶನದ ‘ನರಗುಂದ ಬಂಡಾಯ’ ಚಿತ್ರ ಪ್ರಾರಂಭವಾಗಿ. ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅದಕ್ಕೂ ಮುನ್ನ, ಇತ್ತೀಚೆಗೆ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿವೆ. ಬಿಡುಗಡೆ ಮಾಡಿದವರು ಶಿವರಾಜಕುಮಾರ್. ನರಗುಂದದ ರೈತರ ಬಗ್ಗೆ ಡಾ. ರಾಜಕುಮಾರ್ ಅವರಿಂದ ಕೇಳಿದ್ದರಂತೆ ಶಿವರಾಜಕುಮಾರ್. ‘ನರಗುಂದದ ರೈತರ ಬಗ್ಗೆ ಅಪ್ಪಾಜಿ ಕೂಡ ಮಾತಾಡುತ್ತಿದ್ದರು. ಈಗ ಅದೇ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಕಷ್ಟಪಟ್ಟವರ ಬಗ್ಗೆ ಮಾಡಿರುವ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ.
ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಕೆಲವೇ ವಾಕ್ಯಗಳಲ್ಲಿ ಶಿವರಾಜಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಾಗೇಂದ್ರ ಮಾಗಡಿ ಅವರಿಗೆ ಈ ಕುರಿತು ಚಿತ್ರ ಮಾಡಬೇಕೆಂದನಿಸಿದ್ದು, ನಿರ್ವಪಕ ಸಿದ್ಧೇಶ್ ಹೇಳಿದ ಕಥೆ ಕೇಳಿದ ಮೇಲಂತೆ. ‘80ರ ದಶಕದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಚಿತ್ರ ಇದು. ಆಗಿನ ಸರ್ಕಾರ ರೈತರಿಗೆ ಎರಡೂವರೆ ಸಾವಿರ ರೂಪಾಯಿ ಕಂದಾಯ ಕಟ್ಟುವಂತೆ ಆದೇಶ ನೀಡಿತ್ತು. ಒಂದು ಎಕರೆ ಹೊಲದ ಬೆಲೆಯೇ ಆಗಷ್ಟಿತ್ತು. ಅಂತಹ ಸಂದರ್ಭದಲ್ಲಿ ರೈತರಿಗೆ ಅಷ್ಟೊಂದು ಮೊತ್ತ ಕಟ್ಟುವುದು ಕಷ್ಟವಾಗಿತ್ತು. ಆಗ ಬಸಪ್ಪ ಲಕ್ಕುಂಡಿ ಎಂಬ ರೈತ, ಬೇರೆ ರೈತರನ್ನು ಸಂಘಟಿಸಿ ಹೋರಾಟ ಮಾಡುತ್ತಾರೆ. ಆಗ ನಡೆದ ಹೋರಾಟದಲ್ಲಿ ರೈತರು ಪ್ರಾಣ ಕಳೆದುಕೊಳ್ಳುತ್ತಾರೆ. ನಂತರ ಏನೆಲ್ಲ ಆಗುತ್ತದೆ ಎಂಬುದೇ ‘ನರಗುಂದ ಬಂಡಾಯ’ದ ಕಥೆ’ ಎಂದು ಬಿಡಿಸಿಡುತ್ತಾರೆ ನಾಗೇಂದ್ರ ಮಾಗಡಿ.
ಈ ಚಿತ್ರಕ್ಕೆ ನಿರ್ವಪಕ ಸಿದ್ದೇಶ ವಿರಕ್ತಮಠ ಅವರೇ ಕಥೆ ಬರೆದಿದ್ದಾರೆ. ಅದಕ್ಕೆ ಕಾರಣರಾದವರು ಅವರ ಮಾವ ವಿಜಯ ಕುಲಕರ್ಣಿ. ರೈತ ಹೋರಾಟಗಾರರಾಗಿರುವ ಅವರಿಂದ ಸಾಕಷ್ಟು ವಿಷಯ ಕಲೆ ಹಾಕಿ, ಕಥೆ ಮಾಡಿ, ಇದೀಗ ರೈತಪರ ಸಿನಿಮಾ ಮಾಡಿದ್ದಾರೆ ವಿರಕ್ತಮಠ. ಕಿರುತೆರೆಯಿಂದ ಹಿರಿತೆರೆಗೆ ಹೀರೋ ಆಗಿ ಬಂದಿರುವ ರಕ್ಷ್, ಬಸಪ್ಪ ಕಡ್ಲಿಕೊಪ್ಪ ಎಂಬ ರೈತನ ಪಾತ್ರ ಮಾಡಿದ್ದಾರೆ. ‘ರೈತರಿ ಸಮಸ್ಯೆಗೆ ಸ್ಪಂದಿಸುವ ಪಾತ್ರ ನನ್ನದು’ ಎನ್ನುವ ಅವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಶುಭಾ ಪೂಂಜ ಇಲ್ಲಿ ರಾಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕನ ಹೋರಾಟಕ್ಕೆ ಸಹಕಾರಿಯಾಗಿ ನಿಲ್ಲುತ್ತಾರಂತೆ. ಮಿಕ್ಕಂತೆ ನೀನಾಸಂ ಅಶ್ವತ್ಥ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಭವ್ಯಾ ಅಧಿಕಾರಿಯಾಗಿ ನಟಿಸಿದ್ದಾರಂತೆ. ಕೇಶವಾದಿತ್ಯ ಸಂಭಾಷಣೆ ಬರೆಯುವುದರ ಜತೆಗೆ ಒಂದು ಹಾಡನ್ನೂ ರಚಿಸಿದ್ದು, ಯಶೋವರ್ಧನ್ ಸಂಗೀತ ಸಂಯೋಜಿಸಿದ್ದಾರೆ.