ಬೆಂಗಳೂರಿಗೆ ‘ನಾನಿ’ ಫಿದಾ : ಸಿಲಿಕಾನ್ ಸಿಟಿಯ ಆತಿಥ್ಯಕ್ಕೆ ಮನಸೋತ ತೆಲುಗು ನಟ actor nani

ಇದೇ 24ಕ್ಕೆ ರಿಲೀಸ್‌ಗೆ ಸಿದ್ಧವಾಗಿರುವ ‘ದ ಪ್ಯಾರೈಡಸ್’ ಚಿತ್ರದ ಪ್ರಚಾರಕ್ಕೆಂದು ಸಿಲಿಕಾನ್ ಸಿಟಿಗೆ ಆಗಮಿಸಿದ್ದ ತೆಲುಗು ನಟ ನಾನಿ ಬೆಂಗಳೂರಿಗೆ ಫಿದಾ ಆದರು.
ನಟ ನಾನಿ
ನಟ ನಾನಿtelugu actor nani
Published on

ಬೆಂಗಳೂರು: ಬಹುಸಂಸ್ಕೃತಿ, ಭಾಷೆಯ ನಾಡು, ವಾಸಕ್ಕೆ ಯೋಗ್ಯವಾಗಿರುವ ಬೆಂಗಳೂರು ಮಹಾನಗರವನ್ನು ಮೆಚ್ಚಿಕೊಳ್ಳದವರೇ ಇಲ್ಲ. ಇಲ್ಲಿನ ಆಹಾರ, ವಾತಾವರಣ ಹಾಗೂ ಸಂಸ್ಕೃತಿಯನ್ನು ಸಾಕಷ್ಟು ತಾರೆಯರು ಕೊಂಡಾಡಿದ್ದಾರೆ. ಇದೀಗ ತೆಲುಗು ನಟ ನಾನಿ ಸರದಿ. ಇದೇ 24ಕ್ಕೆ ರಿಲೀಸ್‌ಗೆ ಸಿದ್ಧವಾಗಿರುವ ‘ದ ಪ್ಯಾರೈಡಸ್’ ಚಿತ್ರದ ಪ್ರಚಾರಕ್ಕೆಂದು ಸಿಲಿಕಾನ್ ಸಿಟಿಗೆ ಆಗಮಿಸಿದ್ದ ತೆಲುಗು ನಟ ನಾನಿ ಬೆಂಗಳೂರಿಗೆ ಫಿದಾ ಆದರು. ‘ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಳಿದ ಕ್ಷಣದಿಂದಲೇ ಹೈದರಾಬಾದ್‌ನಲ್ಲೇ ಇದ್ದೀನಿ ಎನ್ನುವಷ್ಟು ಜನರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಕೇವಲ ಸಿನಿಮಾ ಪ್ರಚಾರದ ಕೆಲಸಗಳಿಗಾಗಿ ಬಂದು ತಕ್ಷಣ ಹಿಂತಿರುಗಬೇಕಾಗುತ್ತಿರುವುದರಿಂದ ಬೇಸರವಿದೆ. ಇಲ್ಲಿನ ಆಹಾರ, ಸಂಸ್ಕೃತಿ ಮತ್ತು ಸಂಭ್ರಮವನ್ನು ಸಂಪೂರ್ಣವಾಗಿ ಆಸ್ವಾದಿಸಲು ಇನ್ನೆರಡು ದಿನ ಉಳಿದುಕೊಳ್ಳಬೇಕು ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ಕುಟುಂಬದ ಜತೆ ಬೆಂಗಳೂರಿಗೆ ಬಂದು ಕಾಲ ಕಳೆಯುತ್ತೇನೆ. ಯಾವುದೇ ಭಾಷೆಯ ಸಿನಿಮಾ ಬಂದರೂ ಕನ್ನಡಿಗರು ಪ್ರೀತಿಯಿಂದ ಬೆಂಬಲಿಸುತ್ತಾರೆ. ಬೆಂಗಳೂರಿಗೆ ಬಂದರೆ ನನ್ನ ಮನೆಗೆ ಬಂದಂತೆ ಭಾಸವಾಗುತ್ತದೆ’ ಎಂದು ನಾನಿ ಹೇಳಿಕೊಂಡರು.

ಕರಿಯರ್‌ನ ನಿರೀಕ್ಷಿತ ಚಿತ್ರ

‘ದ ಪ್ಯಾರಡೈಸ್’ ಚಿತ್ರದ ಬಗ್ಗೆ ಮಾತನಾಡುತ್ತಾ ನಾನಿ, ‘ನನ್ನ ವೃತ್ತಿಜೀವನದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಪ್ರತಿಷ್ಠಿತ ಸಿನಿಮಾ ಇದು. ನಾನು ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು ಈ ಚಿತ್ರಕ್ಕಾಗಿಯೇ. ಇದೊಂದು ತಾಯಿ ಮತ್ತು ಮಗನ ಬಾಂಧವ್ಯದ ಕಥೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ಭಾವನೆಯಾದ ತಾಯಿ-ಮಗನ ಪ್ರೀತಿಯನ್ನು ಹೈ - ಆ್ಯಕ್ಷನ್ ಹಾಗೂ ದೃಶ್ಯ ವೈಭವದೊಂದಿಗೆ ಕಟ್ಟಿಕೊಡಲಾಗಿದೆ’ ಎಂದರು. ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದ ಪ್ಯಾರಡೈಸ್’ನಲ್ಲಿ ನಾನಿ ಜತೆ ಕಯಾದು ಲೋಹರ್, ಮೋಹನ್‌ಬಾಬು, ಸೋನಾಲಿ ಕುಲಕರ್ಣಿ, ರಾಘವ್ ಜುಯೆಲ್ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net