‘ಜಿಂಕೆ ಮರಿ’ ಕಮ್‌ಬ್ಯಾಕ್ : 17 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ನಂದಿತಾ ಶ್ವೇತಾ

shwetha (1)
Published on

ಬೆಂಗಳೂರು : ಲೂಸ್ ಮಾದ ಯೋಗಿ ಅಭಿನಯದ 2008ರಲ್ಲಿ ತೆರೆಕಂಡಿದ್ದ ‘ನಂದ ಲವ್ಸ್ ನಂದಿತಾ’ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದವರು ನಟಿ ನಂದಿತಾ ಶ್ವೇತಾ. ಮೊದಲ ಚಿತ್ರವೇ ನಟಿಗೆ ಬಿಗ್ ಬ್ರೇಕ್ ನೀಡಿತ್ತು. ಯಶಸ್ಸಿನ ಬಳಿಕ ಅವರು ತಮಿಳು ಚಿತ್ರರಂಗಕ್ಕೆ ಹಾರಿದರು. ಪ.ರಂಜಿತ್ ನಿರ್ದೇಶನದ ‘ಅಟ್ಟಕಥಿ’ ಮೂಲಕ ಕಾಲಿವುಡ್‌ನಲ್ಲಿ ಕ್ಲಿಕ್ ಆದರು. ಬಳಿಕ ಅಲ್ಲಿಯೇ ನೆಲೆವೂರಿದರು. ಅಲ್ಲದೇ ‘ಎಕ್ಕಡಿಕಿ ಪೋತಾವು ಚಿನ್ನವಾಡ’ ಮೂಲಕ ತೆಲುಗಿಗೂ ಡೆಬ್ಯೂ ಮಾಡಿದ ಅವರು, ಎರಡು ಚಿತ್ರರಂಗಗಳಲ್ಲೂ ಬಿಜಿಯಾದರು. ಹೀಗಾಗಿ ನಂದಿತಾ ಮತ್ತೆ ಸ್ಯಾಂಡಲ್‌ವುಡ್‌ನತ್ತ ತಲೆಹಾಕಿರಲಿಲ್ಲ. ಇದೀಗ 17 ವರ್ಷಗಳ ಬಳಿಕ ‘ನಂದ ಲವ್ಸ್ ನಂದಿತಾ’ ನಟಿ ಕನ್ನಡದ ಮಹಿಳಾ ಪ್ರಧಾನ ಚಿತ್ರದ ಮೂಲಕ ಮತ್ತೆ ಚಂದನವನಕ್ಕೆ ಮರಳುತ್ತಿದ್ದಾರೆ. ಹೆಸರು ‘ಬೆನ್ನಿ’. ‘ಪೆಪೆ’ ಖ್ಯಾತಿಯ ಶ್ರೀಲೇಶ್ ನಾಯರ್ ನಿರ್ದೇಶಿಸುತ್ತಿರುವ ಚಿತ್ರವಿದು. ‘ಹೊಂದಿಸಿ ಬರೆಯಿರಿ’ ನಿರ್ದೇಶಕ, ನಿರ್ಮಾಪಕ ಜಗನ್ನಾಥ್ ರಾಮೇನಹಳ್ಳಿ ‘ಬೆನ್ನಿ’ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ನಟ ಸುದೀಪ್ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಘೋಷಿಸಿದರು. ಟೀಸರ್‌ನಲ್ಲಿ ಶ್ವೇತಾ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಅಹಿಂಸೆ ಪಾಠ ಮಾಡುವ ಶಿಕ್ಷಕಿಯಾಗಿ, ನಂತರ ಒಂದು ಕೈಯಲ್ಲಿ ಕತ್ತಿ, ಇನ್ನೊಂದು ಕೈಯಲ್ಲಿ ಸುತ್ತಿಗೆ ಹಿಡಿದು ಶತ್ರುಗಳನ್ನು ಎದುರಿಸಲು ಸಿದ್ಧರಾಗಿ ನಿಂತಿದ್ದಾರೆ. ಆಹಿಂಸೆ ಪಾಠದ ಜತೆ ಜತೆಗೆ ತಣ್ಣನೆಯ ಕ್ರೌರ್ಯದ ವಿಷಯ ಚಿತ್ರದಲ್ಲಿದೆ.

‘ಬೆನ್ನಿ’ ಬೆನ್ನಿಗೆ ನಿಂತ ಕಿಚ್ಚ!

‘ಒಂದು ಹೆಣ್ಣಿನ ತಾಳ್ಮೆ ಏಳು ಸಾಗರದ ನೀರಿಗೆ ಸಮ. ಆದರೆ, ಅವಳ ಕುಟುಂಬಕ್ಕೆ ಯಾರಾದರೂ ತೊಂದರೆ ಕೊಟ್ಟರೆ, ಅವಳು ಹಚ್ಚುವ ಬೆಂಕಿಯನ್ನು ಏಳು ಸಾಗರದ ನೀರಿಗೂ ಆರಿಸಲು ಆಗಲ್ಲ’ ಎಂದು ಸಾಗುವ ಸುದೀಪ್ ಹಿನ್ನೆಲೆ ಧ್ವನಿ ಟೀಸರ್‌ನ ಹೈಲೈಟ್. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಪ್ರಮುಖರು ಅಭಿನಯಿಸಲಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ನೀಡಲಿದೆ. ಸಚಿನ್ ಬಸ್ರೂರ್ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್, ರಂಜನ್ ನರಸಿಂಹ ಮೂರ್ತಿ ಸಂಕಲನ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net