ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮ ಕತೆ ...

Nanagoo Love Agide - Final
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಪ್ರೇಮಕಥೆಗಳು ಇದುವರೆಗೂ ಬಂದಿವೆ. ಈಗ ಇನ್ನೊಂದು ವಿಭಿನ್ನ ಪ್ರೇಮಕಥೆ ಇರುವ ಚಿತ್ರವೊಂದು ಇತ್ತೀಚೆಗೆ ಸದ್ದಿಲ್ಲದೆ ಸೆಟ್ಟೇರಿದೆ. ಚಿತ್ರದ ಹೆಸರು 'ನನಗೂ ಲವ್ವಾಗಿದೆ'.

ಹೆಸರು ಕೇಳಿದಾಕ್ಷಣ ಇದೊಂದು ಲವ್​ಸ್ಟೋರಿ ಇರಬಹುದೆಂಬ ಭಾವನೆ ಬರುವುದು ಸಹಜ. ಅದು ನಿಜ. ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮಕಥೆ ಇರುವ ಈ ಚಿತ್ರದಲ್ಲಿ, ಹಲವು ತಿರುವುಗಳಿವೆಯಂತೆ. ಈ ಚಿತ್ರದ ಕಥೆ ಬರೆಯುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೆ.ನೀಲಕಂಠನ್ ಹೊತ್ತಿದ್ದಾರೆ. ಅದರ ಜತೆಗೆ ಅವರು ಖಳನಾಯಕನಾಗಿಯೂ ಬಣ್ಣ ಹಚ್ಚುತ್ತಿದ್ದಾರೆ.

ಕೆ. ನೀಲಕಂಠನ್​, ಕಾಳಿ ಅಮ್ಮನ ಭಕ್ತರಾಗಿರುವುದರಿಂದ ಶ್ರೀ ಕಾಳಿ ಅಮ್ಮನ್ ಪಿಕ್ಚರ್ಸ್​​ ಬ್ಯಾನರ್​ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಪ್ಪ ಬಂಡವಾಳ ಹೂಡುತ್ತಿರುವ ಈ ಸಿನಿಮಾ ಮೂಲಕ ಮಗ ಸೋಮವಿಜಯ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.

ವಿಜಯ್ ರಾಜಶೇಖರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಸೋಮವಿಜಯ್​ಗೆ ನಾಯಕಿಯಾಗಿ ರೋಶಿನಿ ನಟಿಸುತ್ತಿದ್ದಾರೆ. ಐದು ಹಾಡುಗಳಿಗೆ ಬಿ.ಆರ್. ಹೇಮಂತ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾಂ, ಚಿಕ್ಕಮಗಳೂರು ಹಾಗೂ ಸಕಲೇಶಪುರದ ಸುಂದರ ತಾಣಗಳಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net