ಸೂಕ್ಷ್ಮ ಸಂವೇದನೆಯ ‘ದ ಇನ್ವಿಸಿಬಲ್ ಸ್ಟ್ರಿಂಗ್’: ಬೆಂಗಳೂರು ಮೂಲದ ನಮ್ರತಾ ನಿರ್ದೇಶನದ ಕಿರುಚಿತ್ರ

NAMRATHA W
Published on

ಬೆಂಗಳೂರು: ಥಿಯರಿಗಳ ಸ್ಫೂರ್ತಿಯಾಗಿಟ್ಟುಕೊಂಡು ಹಲವು ಸಿನಿಮಾ, ಡಾಕ್ಯುಮೆಂಟರಿ, ಕಿರುಚಿತ್ರಗಳು ತೆರೆಕಂಡಿವೆ. ಇದೀಗ ಕನ್ನಡದಲ್ಲಿ ಬೆಂಗಳೂರು ಮೂಲದ ನಮ್ರತಾ ‘ದ ಇನ್ವಿಸಿಬಲ್ ಸ್ಟ್ರಿಂಗ್’ ಥಿಯರಿಯನ್ನೇ ಆಧಾರವಾಗಿಟ್ಟುಕೊಂಡು ಸೂಕ್ಷ್ಮವಾದ ಕಥೆಯನ್ನು ಹೆಣೆದಿದ್ದು, ಅದಕ್ಕೆ ‘ದ ಇನ್ವಿಸಿಬಲ್ ಸ್ಟ್ರಿಂಗ್’ ಎಂದೇ ಹೆಸರಿಟ್ಟಿದ್ದಾರೆ. ಈ ಕಿರುಚಿತ್ರ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಸ್ಫರ್ಧಿಸಿದ್ದು, ಮೆಚ್ಚುಗೆ ಗಳಿಸಿದೆ. ಈ ಜರ್ನಿ ಕುರಿತು ನಮ್ರತಾ, ‘‘ದ ಇನ್ವಿಸಿಬಲ್ ಸ್ಟ್ರಿಂಗ್’ ಥಿಯರಿ ಪ್ರಕಾರ ನಾವೆಲ್ಲರೂ ಒಬ್ಬರಿಗೊಬ್ಬರು ಕನೆಕ್ಟ್ ಆಗಿದ್ದು, ಒಂದಲ್ಲ ಒಂದು ದಿನ ಭೇಟಿಯಾಗಿ ನಮ್ಮನ್ನು ನಾವು ಬದಲಾವಣೆಗೆ ಮುಂದಾಗುತ್ತೇವೆ ಎಂದು ಹೇಳುತ್ತದೆ. ಇದು ನನಗೆ ತುಂಬಾ ಯೋಚಿಸುವಂತೆ ಮಾಡಿತು. ಆಗ ನನಗೆ ಈ ಕಥೆ ಹೊಳೆಯಿತು. ಒಬ್ಬ ವೃದ್ಧ, ಹುಡುಗಿ ಹಾಗೂ ಬಾಲಕನನ್ನು ಇಟ್ಟುಕೊಂಡು ಈ ಕಥೆ ಹೆಣೆದೆ. ಈ ಮೂವರು ಹೇಗೆ ಒಂದೇ ವೇದಿಕೆಯಲ್ಲಿ ಕನೆಕ್ಟ್ ಆಗುತ್ತಾರೆ ಎನ್ನುವುದೇ ಸ್ಟೋರಿ. ಈ ಕಥೆ ಬರೆದಾಗಲೇ ಸಿದ್ಲಿಂಗು ಶ್ರೀಧರ್, ಭೂಮಿ ಶೆಟ್ಟಿ ನನ್ನ ಆಯ್ಕೆಯಾಗಿದ್ದರು. ಅವರನ್ನು ಒಪ್ಪಿಸಿದೆ. ಕೋರಮಂಗಲದಲ್ಲಿ ಎರಡು ದಿನ ಶೂಟಿಂಗ್ ಮಾಡಿದ್ದೇವೆ. ಈ ಕಿರುಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತದೆ. ನನ್ನಲ್ಲಿನ ಆಳವಾದ ಭಾವನೆಗಳನ್ನು ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ’ ಎನ್ನುವ ನಮ್ರತಾ, ಸದ್ಯ ಪದವಿ ಮುಗಿಸಿದ್ದು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲು ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net