ಚೆನ್ನೈನಲ್ಲಿ ಬಿಡುಗಡೆಯಾಯ್ತು 'ಕಬ್ಜ' ಚಿತ್ರದ 'ನಮಾಮಿ ನಮಾಮಿ' ಹಾಡು …

Kabzaa 3
Published on

ಬೆಂಗಳೂರು: ಉಪೇಂದ್ರ-ಸುದೀಪ್​ ಅಭಿನಯದ ಪ್ಯಾನ್​ ಇಂಡಿಯಾ ಚಿತ್ರ 'ಕಬ್ಜ' ಬಿಡುಗಡೆಗೆ ಇನ್ನೊಂದು ತಿಂಗಳಷ್ಟೇ ಉಳಿದಿದೆ. ಚಿತ್ರತಂಡ ಸಹ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಈಗ ಶಿವರಾತ್ರಿ ಪ್ರಯುಕ್ತ ಇನ್ನೂ ಒಂದು ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ.

ವಿಶೇಷವೆಂದರೆ, ಈ ಹಾಡನ್ನು ಚೆನ್ನೈನಲ್ಲಿ ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ನಾಯಕಿ ಶ್ರೇಯಾ ಶರಣ್​, ನಿರ್ದೇಶಕ ಆರ್​. ಚಂದ್ರು, ಇನ್ಫೀನಿಯೋ ಪಿಕ್ಚರ್ಸ್​ನ ಅಲಂಕಾರ್​ ಪಾಂಡಿಯನ್​ ಮುಂತಾದವರು ಭಾಗವಹಿಸಿದ್ದಾರೆ. ಮಹಾಶಿವನನ್ನು ಕೊಂಡಾಡುವ 'ನಮಾಮಿ ನಮಾಮಿ' ಎಂಬ ಹಾಡನ್ನು ಕಿನಾಲ್ ರಾಜ್ ಬರೆದಿದ್ದು, ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

'ಕಬ್ಜ'  ಚಿತ್ರದ ಹಾಡುಗಳನ್ನು  ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡ ನಿರ್ದೇಶಕ ಆರ್​. ಚಂದ್ರು, 'ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ' ಎಂದು ಹೇಳಿದರು.

ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎನ್ನುವ ಶ್ರೇಯಾ, 'ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ' ಎಂದು ಮಾಹಿತಿ ನೀಡಿದರು.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್​ನಡಿ ನಿರ್ಮಾಣವಾಗಿರುವ ಈ ಚಿತ್ರದ ಇನ್ನೊಂದು ಹಾಡು ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರಕ್ಕೆ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net