

ಬೆಂಗಳೂರು: ‘ಸೆಕೆಂಡ್ ಹಾಫ್’ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಿರಂಜನ್ ಸುಧೀಂದ್ರ, ‘ನಮ್ಮ ಹುಡುಗರು’ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದರು. ಅದಾದ ಬಳಿಕ ‘ಸೂಪರ್ ಸ್ಟಾರ್’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ವಿಷಯ ಏನೆಂದರೆ, ‘ನಮ್ಮ ಹುಡುಗರು’ ಚಿತ್ರ ಬಿಡುಗಡೆಯ ತಯಾರಿಯಲ್ಲಿದೆ. ಮೊದಲಾರ್ಥವಾಗಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಉಪೇಂದ್ರ ದಂಪತಿ ಆಗಮಿಸಿ ಅಣ್ಣನ ಮಗನ ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ. ‘ನಮ್ಮ ಹುಡುಗರು’ ಚಿತ್ರದ ಟೀಸರ್ನಲ್ಲಿ ಡಾ. ವಿಷ್ಟುವರ್ಧನ್ ಸಹ ಕಾಣಿಸಿಕೊಂಡಿದ್ದಾರೆ! ಅಂದರೆ, ವಿಷ್ಣು ಅವರ ಬೃಹತ್ ಕಟೌಟ್ನಿಂದ ನಿರಂಜನ್ ಮೇಲೆ ಹೂವಿನ ಹಾರ ಬೀಳುವಂತೆ ಇಂಟ್ರೊಡಕ್ಷನ್ ದೃಶ್ಯವೊಂದನ್ನು ಸೆರೆಹಿಡಿಯಲಾಗಿದೆ. ಚಿತ್ರದಲ್ಲಿ ಈ ದೃಶ್ಯ ಅಳವಡಿಸುವುದಕ್ಕೂ ಕಾರಣವಿದೆ.
ವಿಷ್ಣು ಅಭಿನಯದ ‘ಬಳ್ಳಾರಿ ನಾಗ’ ಚಿತ್ರದಲ್ಲಿ ಅವರ ಬಾಲ್ಯದ ಪಾತ್ರದಲ್ಲಿ ನಿರಂಜನ್ ನಟಿಸಿದ್ದರು. ಅವರ ಆಶೀರ್ವಾದ ಪಡೆಯುವ ರೀತಿಯಲ್ಲಿ ದೃಶ್ಯವನ್ನು ಸಂಯೋಜಿಸಿದ್ದಾರಂತೆ ನಿರ್ದೇಶಕ ಎಚ್.ಬಿ. ಸಿದ್ದು. ಮಂಡ್ಯ ಭಾಗದ ಹುಡುಗನಾಗಿ ನಿರಂಜನ್ ಕಾಣಿಸಿಕೊಂಡಿದ್ದು, ಅವರಿಗೆ ರಾಧ್ಯಾ ಜೋಡಿಯಾಗಿ ನಟಿಸಿದ್ದಾರೆ. ಅವರಿಗೂ ಇದು ಚೊಚ್ಚಲ ಸಿನಿಮಾ. ಶರತ್ ಲೋಹಿತಾಶ್ವ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪ್ರವೀಣ್, ಅಲೋಕ್ ಸೇರಿ ಹಲವರಿದ್ದಾರೆ. ಕೆ.ಕೆ. ಅಶ್ರಫ್ ನಿರ್ಮಾಣ ಮಾಡಿರುವ ಈ ಚಿತ್ರದ ಹಾಡುಗಳಿಗೆ ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ದೀಪು ಕುಮಾರ್ ಸಂಕಲನ, ಚಿದಾನಂದ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ 20ಕ್ಕೆ ನಿರಂಜನ್ ಬರ್ತ್ಡೇ. ಅಂದು ಚಿತ್ರದ ಹಾಡೊಂದನ್ನು ತಂಡ ಬಿಡುಗಡೆ ಮಾಡಲಿದೆ.