ನಹಿ ಜ್ಞಾನೇನ ಸದೃಶಂ ಟ್ರೇಲರ್ ಬಿಡುಗಡೆ; ಅನಿವಾಸಿ ಕನ್ನಡಿಗ ರಾಮ್ ನಿರ್ದೇಶನದ ಚಿತ್ರ

Movie
Published on

ಬೆಂಗಳೂರು: ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ಶ್ಲೋಕ ‘ನಹಿ ಜ್ಞಾನೇನ ಸದೃಶಂ’. ಈಗ ಆ ಶ್ಲೋಕವೇ ಸಿನಿಮಾ ಆಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಶಿಕ್ಷಣ ತಜ್ಞರಾದ ಶಶಿ, ಮರಿಸ್ವಾಮಿ ರೆಡ್ಡಿ, ಪವನ್ ಕುಮಾರ್, ಶ್ರೀನಿವಾಸಲು ಹಾಗು ಶಾಂತಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಚಿತ್ರಕ್ಕೆ ‘ಶಿಕ್ಷಣದ ಜತೆ ಮನರಂಜನೆ’ ಎಂಬರ್ಥದ ಇಂಗ್ಲೀಷ್ ಅಡಿಬರಹವಿದೆ. ಅಮೆರಿಕಾ ನಿವಾಸಿ ಕನ್ನಡಿಗ ರಾಮ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದರ ಜತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆಶ್ರಮ ಸೇರಲು ಅಮೆರಿಕಾದಿಂದ ಬರುವ ರೋಬೋಟಿಕ್ ಎಂಜಿನಿಯರ್ ರಾಮ್ ಕಾರಣಾಂತರದಿಂದ ಬಳ್ಳಾರಿಯ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸಕ್ಕೆ ಸೇರಬೇಕಾಗುತ್ತದೆ. ಶಾಲೆಯಲ್ಲಿ ತನ್ನದೇ ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಆರಂಭಿಸುವ ರಾಮ್ ಮೇಲೆ ಕೆಲ ಅಪವಾದಗಳನ್ನು ಹೊರಿಸಲಾಗುತ್ತದೆ. ಆ ಆರೋಪಗಳಿಂದ ರಾಮ್ ಹೇಗೆ ಹೊರಬರುತ್ತಾನೆ? ಎಲ್ಲರಲ್ಲು ಶಿಕ್ಷಣದ ಮಹತ್ವದ ಬಗ್ಗೆ ಹೇಗೆ ಅರಿವು ಮೂಡಿಸುತ್ತಾನೆ ಎಂಬುದರ ಸುತ್ತ ‘ನಹಿ ಜ್ಞಾನೇನ ಸದೃಶಂ’ ಚಿತ್ರದ ಕಥೆ ಸುತ್ತುತ್ತದೆ.

ಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳ ಪಾತ್ರದಲ್ಲಿ ಚಿಣ್ಣರಾದ ವೇದಿಕಾ, ಅಭಪಾಲಿ, ಮಹೇಶ್, ಬೆಟ್ಟೇಶ್, ಶರತ್, ಗಗನಾ, ಶ್ರೀನಿಧಿ, ಲಿಂಗೇಶ್ ನಟಿಸಿದ್ದು, ಅರುಣಾ ಬಾಲರಾಜ್, ರಾಘವೇಂದ್ರ ನಾಯಕ್, ವಾಸುದೇವ ಮೂರ್ತಿ ತಾರಾಗಣದಲ್ಲಿದ್ದಾರೆ. ಉಳಿದಂತೆ ಪ್ರಮೋದ್ ಮರವಂತೆ ಸಾಹಿತ್ಯ, ಅರ್ಜುನ್ ರಾಮು ಸಂಗೀತ, ಶಿವಕುಮಾರ್ ಸಂಕಲನ, ಸುದರ್ಶನ್ - ರಾಮ್ ಸಾಹಸ ನಿರ್ದೇಶನವಿದೆ. ಗೆಳೆಯರೇ ಸೇರಿಕೊಂಡು ಫ್ರೆಂಡ್ಸ್ ಫಂಡೆಡ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net