

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ 1993ರಲ್ಲಿ "ಚಿನ್ನಾರಿ ಮುತ್ತ' ಚಿತ್ರ ನಿರ್ದೇಶಿಸಿದ್ದರು. ವಿಜಯ ರಾವೇಂದ್ರ ಬಾಲನಟನಾಗಿ ಅಭಿನಯಿಸಿದ್ದ ಈ ಚಿತ್ರಕ್ಕೆ ಒಂದು ರಾಷ್ಟ್ರಪ್ರಶಸ್ತಿ ಜತೆಗೆ ನಾಲ್ಕು ರಾಜ್ಯ ಪ್ರಶಸ್ತಿಗಳು ದೊರೆತಿದ್ದವು. ಇದೀಗ 31 ವರ್ಷಗಳ ಬಳಿಕ ನಾಗಾಭರಣ ಅವರ ಪತ್ನಿ ನಾಗಿಣಿ ಭರಣ "ಜೀನಿಯಸ್ ಮುತ್ತ' ಚಿತ್ರಕ್ಕೆ ಆ್ಯಕ್ಷನ್&ಕಟ್ ಹೇಳಿದ್ದಾರೆ. ಚಿತ್ರದಲ್ಲಿ "ಜೀನಿಯಸ್ ಮುತ್ತ'ನಾಗಿ ಶ್ರೇಯಸ್ ಜೈಪ್ರಕಾಶ್ ನಟಿಸಿದ್ದು, ವಿಶೇಷ ಪಾತ್ರದಲ್ಲಿ "ಚಿನ್ನಾರಿ ಮುತ್ತ' ವಿಜಯ್ ರಾವೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ನಾಗಿಣಿ ಭರಣ, "ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡಲು ಎಲ್ಲರೂ ಹೇಳುತ್ತಿದ್ದರು. ಆದರೆ, ಆಗಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ವಿಭಿನ್ನ ಕಥಾಹಂದರದ ಚಿತ್ರವಿದು. ಬಹುತೇಕ ಬಿಳಿಗಿರಿರಂಗನ ಬೆಟ್ಟದಲ್ಲಿ ಶೂಟಿಂಗ್ ನಡೆಸಿದ್ದೇವೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ವಿದೇಶಗಳಲ್ಲೂ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ' ಎಂದು ಸಂತಸ ವ್ಯಕ್ತಪಡಿಸಿದರು. "ನಾಗಿಣಿ ನನ್ನೆಲ್ಲ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಸಹಕಾರ ನೀಡುತ್ತಿದ್ದರು. ಈಗ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ' ಎಂದು ಮಾಹಿತಿ ನೀಡಿದರು ನಾಗಾಭರಣ.
"ನಾನು ನಾಗಾಭರಣ ಅವರ ಗರಡಿಯಲ್ಲೇ ನಟನೆ ಕಲಿತಿದ್ದು' ಎಂದರು ಬಾಲನಟ ಮಾಸ್ಟರ್ ಶ್ರೇಯಸ್. ನಟ ವಿಜಯ್ ರಾವೇಂದ್ರ, "ನನ್ನ ಹೆಸರಿಗಿಂತ ಎಲ್ಲರಿಗೂ ನಾನು ಚಿನ್ನಾರಿ ಮುತ್ತ ಎಂದೇ ಪರಿಚಿತ. ಅದಕ್ಕೆ ಅವಕಾಶ ನೀಡಿದವರು ನಾಗಾಭರಣ ಸರ್. ಈಗ ನಾಗಿಣಿ ಮೇಡಂ ನಿರ್ದೇಶನದಲ್ಲೂ ನಟಿಸಿರುವುದು ಖುಷಿ ನೀಡಿದೆ' ಎಂದರು. "ಜೀನಿಯಸ್ ಮುತ್ತ' ಇದೇ ಆ. 9ರಂದು ತೆರೆಗೆ ಬರಲಿದೆ.