

ಬೆಂಗಳೂರು : ಕನ್ನಡ ಕಿರುತೆರೆ ಜತೆ ಜತೆಗೆ ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿರುವವರು ನಟಿ ನಾಗಶ್ರೀ ಬೇಗಾರ್. ಮೂಲತಃ ರಂಗಭೂಮಿ ಕಲಾವಿದರಾದ ಅವರು ‘ವೈಶಂಪಾಯನ ತೀರ’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ ‘ಜಲಪಾತ’ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಇನ್ನೊಂದು ವಿಶೇಷ ಏನೆಂದರೆ, ಮೊದಲ ಎರಡು ಚಿತ್ರಗಳನ್ನು ನಿರ್ದೇಶಿಸಿದವರು ನಾಗಶ್ರೀ ತಂದೆ ರಮೇಶ್ ಬೇಗಾರ್. ಇದೀಗ ನಾಗಶ್ರೀ, ಅಪ್ಪ ರಮೇಶ್ ಬೇಗಾರ್ ಆ್ಯಕ್ಷನ್-ಕಟ್ ಹೇಳಲಿರುವ ಮೂರನೇ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಇಲ್ಲಿ ಅವರು ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಜಾಣಗೆರೆ ವೆಂಕಟರಾಮಯ್ಯ ಅವರ ಐತಿಹಾಸಿಕ ಕಾದಂಬರಿಯಾಧರಿತ ಚಿತ್ರ. ಇದೊಂದು ಪ್ಯಾರಲಲ್ ಕಥೆಯಾಗಿದ್ದು, ಅದ್ದೂರಿ ಹಾಗೂ ಕಲಾತ್ಮಕವಾಗಿ ಮೂಡಿಬರಲಿದೆ. ನನ್ನ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಐತಿಹಾಸಿಕ ರಾಣಿಯಾಗಿ ಹಾಗೆಯೇ ಆಧುನಿಕ ಹುಡುಗಿ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ರಂಗಭೂಮಿಯಿಂದ ಬಂದಿರುವ ಕಾರಣ ನನಗೆ ಈ ಪಾತ್ರ ಅಷ್ಟು ಕಷ್ಟ ಅನ್ನಿಸುವುದಿಲ್ಲ. ಆದರೂ, ಒಂದಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಐತಿಹಾಸಿಕ ಕಥೆಗಳನ್ನು ಓದುತ್ತಿದ್ದೇನೆ. ಸಿನಿಮಾಗಳನ್ನು ನೋಡುತ್ತಿದ್ದೇನೆ. ರಾಣಿಯರ ಹಾವಭಾವ- ಗತ್ತು ಹೀಗೆ ನಾನಾ ಸೂಕ್ಷ್ಮ ಅಂಶಗಳನ್ನು ಅರಿಯುತ್ತಿದ್ದೇನೆ. ಇನ್ನು ಪಾತ್ರಕ್ಕೆ ಕಣ್ಮನಸೆಳೆಯುವ ಕಾಸ್ಟ್ಯೂಮ್ ಬೇಕಿದ್ದು, ಬೆಂಗಳೂರಿನ ರಚಿತಾ ಎಂಬುವವರು ಅದರ ಹೊಣೆ ಹೊತ್ತಿದ್ದಾರೆ. ರಾಣಿಯರು ಧರಿಸುತ್ತಿದ್ದ ಕಾಸ್ಟ್ಯೂಮ್‌ಗಳ ಅಧ್ಯಯನ ನಡೆಸಿಯೇ ಅವರು ಉಡುಗೆಗಳನ್ನು ಡಿಸೈನ್ ಮಾಡುತ್ತಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ಬಿಜಿಯಾಗಿರುವ ನಾಗಶ್ರೀ ಕನ್ನಡದ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.