ಬಣ್ಣದ ಶಾಲೆಯಿಂದ ಬಣ್ಣದ ಲೋಕದತ್ತ: ಮತ್ತೆ ಅಭಿನಯದ ಆಸೆ ಹೆಚ್ಚಿಸಿಕೊಂಡ ನಾಗರಾಜ್​

ನಾಗರಾಜ್​
Published on

ಬಣ್ಣ ಎಂಬ ಅಭಿನಯ ಶಾಲೆ ಆರಂಭಿಸಿ ಚಿತ್ರರಂಗದಿಂದ ಸ್ವಲ್ಪ ದೂರವಿದ್ದ ನಟ ನಾಗರಾಜ್ ಕೋಟೆ ಇದೀಗ ಮತ್ತೆ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ. ಹಾಗಂತ ಅವರ ಬಣ್ಣ ಅಭಿನಯ ಶಾಲೆಯೇನೂ ನಿಂತುಹೋಗುವುದಿಲ್ಲ. ಅದರ ಜತೆಜತೆಗೇ ಅವರು ಸ್ವತಃ ಬಣ್ಣ ಹಚ್ಚುವ ಆಸಕ್ತಿ ತಳೆದಿದ್ದಾರೆ. ಈ ನಿಟ್ಟಿನಲ್ಲಿ ಶಾಲೆಗೆ ಬೇಕಾಗಿರುವ ಅಗತ್ಯ ಏರ್ಪಾಡು ಮಾಡಿರುವ ನಾಗರಾಜ್, ಮತ್ತೆ ಬಣ್ಣದ ಜಗತ್ತಿನ ‘ಕೋಟೆ’ಯೊಳಗೆ ಕಳೆದುಹೋಗಲು ನಿರ್ಧರಿಸಿದ್ದಾರೆ.

ಈ ಹಿಂದೆ ಟಿವಿಯಲ್ಲಿ ಕಾಮಿಡಿ ಶೋ, ಹಾಸ್ಯ ನಟನೆ, ಸ್ಟಾ್ಯಂಡಪ್ ಕಾಮಿಡಿಯನ್ ಮಾತ್ರವಲ್ಲದೆ ‘ಬಾನಾಡಿ’ ಎಂಬ ಸಿನಿಮಾಗೆ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ನಾಗರಾಜ್, 2015ರಿಂದ ನಟನೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರಿಂದ ಸ್ಯಾಂಡಲ್​ವುಡ್​ನಿಂದ ಮರೆಯಾಗಿದ್ದರು.

‘2011ರಲ್ಲಿ ನಾನು ಬಣ್ಣ ಅಭಿನಯ ಶಾಲೆ ಆರಂಭಿಸಿದೆ. ಅದನ್ನು ಒಂದು ಹಂತಕ್ಕೆ ತಂದು ನಿಲ್ಲಿಸಬೇಕಾದ್ದರಿಂದ ಅಲ್ಲೇ ಬಿಜಿಯಾದೆ. ನಂತರ 2016ರಲ್ಲಿ ಮಗನ ಮದುವೆ ಹಿನ್ನೆಲೆಯಲ್ಲಿ ಬಿಜಿಯಾದೆ. ಹೀಗಾಗಿ ಚಿತ್ರರಂಗದತ್ತ ಹೆಚ್ಚು ಗಮನಹರಿಸಲು ಆಗಿರಲಿಲ್ಲ. ಆದ್ದರಿಂದ ಹಲವರು ನಾನು ಅಭಿನಯದಿಂದಲೇ ದೂರವಾಗಿದ್ದೇನೆ ಎಂದು ಭಾವಿಸಿರಬೇಕು. ಅದೇ ಕಾರಣಕ್ಕೆ ನಟನೆಗಾಗಿ ಬರುತ್ತಿದ್ದ ಕರೆಗಳೂ ಕಡಿಮೆಯಾದವು’ ಎನ್ನುತ್ತ ತಮ್ಮ ತೆರೆಮರೆಯ ಜೀವನದ ಬಗ್ಗೆ ಹೇಳಿಕೊಂಡರು ನಾಗರಾಜ್. ‘ಬಣ್ಣ ಅಭಿನಯ ಶಾಲೆ ಈಗ ಒಂದು ಹಂತಕ್ಕೆ ತಲುಪಿದೆ. ಕಿರಿಯ ಪುತ್ರ ಅದರ ಜವಾಬ್ದಾರಿ ವಹಿಸಿಕೊಂಡಿದ್ದಾನೆ. ಜತೆಗೆ ದೇವರಾಜ್ ಎಂಬ ಸಮರ್ಥ ವ್ಯವಸ್ಥಾಪಕರೂ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ನಿರ್ದೇಶಕ-ನಿರ್ವಪಕರ ಅಗತ್ಯಕ್ಕೆ ತಕ್ಕಂತೆ ಎಷ್ಟು ದಿನಕ್ಕೆ ಬೇಕಾದರೂ ಕಾಲ್​ಶೀಟ್ ನೀಡಬಲ್ಲೆ. ಆದ್ದರಿಂದ ಇನ್ನು ಮುಂದೆ ಅಭಿನಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ’ ಎನ್ನುತ್ತಾರೆ ನಾಗರಾಜ್.

ವೈಯಕ್ತಿಕ ಜವಾಬ್ದಾರಿಗಳಿಂದ ಮುಕ್ತನಾಗಿರುವುದರಿಂದ ಚಿತ್ರರಂಗದತ್ತ, ಮತ್ತೆ ಅಭಿನಯಿಸುವತ್ತ ಚಿತ್ತ ಹರಿಸಿದ್ದೇನೆ. | ನಾಗರಾಜ್ ಕೋಟೆ ಕಲಾವಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net