Vidyapathi Movie Review; ಮೊದಲು ಕಿತಾಪತಿ, ನಂತರ ಪಜೀತಿ, ಕೊನೆಗೆ ಅಧಿಪತಿ

SC
Published on

ಚಿತ್ರ: ವಿದ್ಯಾಪತಿ

ನಿರ್ದೇಶನ: ಎಶಾಂ ಮತ್ತು ಹಸೀನ್​

ನಿರ್ಮಾಣ: ಡಾಲಿ ಧನಂಜಯ

ತಾರಾಗಣ: ನಾಗಭೂಷಣ, ಮಲೈಕಾ ಟಿ. ವಸುಪಾಲ್​, ಧನಂಜಯ, ಗರುಡ ರಾಮ್​, ಶ್ರೀವತ್ಸ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

"ಅವನು ಲಾಭ ಇಲ್ಲದೇ ಒಂದು ಕಡ್ಡೀನೂ ಎತ್ತಿಡಲ್ಲ. ಏನೋ ಪ್ಲಾ$್ಯನ್​ ಮಾಡಿಕೊಂಡೇ ಮನೆಗೆ ವಾಪಸ್​ ಬಂದಿದಾನೆ ಬಡ್ಡಿಮಗ' ಅಂತ ಮೂರು ವರ್ಷಗಳ ನಂತರ ಮನೆಗೆ ಮರಳಿದ ಮಗ ಸಿದ್ದು (ನಾಗಭೂಷಣ) ಬಗ್ಗೆ ಆತನ ತಂದೆಯೇ ಕಿಡಿಯಾಗುತ್ತಾರೆ. ಅರೆರೆ ಹೆತ್ತ ತಂದೆಯೇ ಸುಪುತ್ರನ ಬಗ್ಗೆ ಇಷ್ಟೆಲ್ಲ "ಗೌರವ' ನೀಡುತ್ತಿದ್ದಾರೆ ಅಂದರೆ, ಆ ಸಿದ್ದು ಜಗತ್​ ಕಿಲಾಡಿಯೇ ಇರಬೇಕು ಅಂತ ಅನ್ನಿಸುವುದು ಸಾಮಾನ್ಯ. ಆದರೆ, ಈ ಸಿದ್ದು ಅದಕ್ಕೂ ಒಂದು ಕೈ ಹೆಚ್ಚು!

ಆತನ ಪಾಲಿಗೆ ಜನ ಅಂದರೆ ಆತನಿಗೆ ಯೂಸ್​ ಆ್ಯಂಡ್​ ಥ್ರೋ ವಸ್ತುಗಳಷ್ಟೇ. ತಾನು ಬೆಳೀಬೇಕು, ಅಂದರೆ ಯಾರ ಹೊಟ್ಟೆ, ತಲೆ ಮೇಲೆ ಬೇಕಾದರೂ ಕೈ, ಕಾಲು ಇಡುವಷ್ಟು ಸ್ವಾರ್ಥಿ. ಆತನಿಗೆ ಬ್ಯಾಕ್​ ಟು ಬ್ಯಾಕ್​ ಆರು ಹಿಟ್​ ಸಿನಿಮಾ ನೀಡಿದ ನಟಿ ವಿದ್ಯಾ (ಮಲೈಕಾ) ಮೇಲೆ ಮನಸ್ಸಾಗುತ್ತದೆ. ಕಿಲಾಡಿ ಸಿದ್ದು ಇನ್ನಿಲ್ಲದ ನಾಟಕಗಳನ್ನಾಡಿ ಆಕೆಯನ್ನು ಪ್ರೇಮಪಾಶಕ್ಕೆ ಸಿಲುಕಿಸಿಕೊಂಡು, ಮದುವೆ ಆಗಿಬಿಡುತ್ತಾನೆ. ಅನಾಥೆ ವಿದ್ಯಾಳ ಮನೆ ಸೇರುವ ಸಿದ್ದು ಆಕೆ ದುಡಿದ ಹಣ ಉಡಾಯಿಸುತ್ತಿರುತ್ತಾನೆ. ಅದರ ನಡುವೆ ಲೋಕಲ್​ ರೌಡಿ ಜಗ್ಗು (ಗರುಡ ರಾಮ್​) ಕಣ್ಣು ವಿದ್ಯಾಳ ಮೇಲೆ ಬೀಳುತ್ತದೆ. ವಿದ್ಯಾಳ ಕೆಂಗಣ್ಣು ಸಿದ್ದು ಮೇಲೆ ಬೀಳುತ್ತದೆ. ಜಗ್ಗುಗೆ ಬುದ್ಧಿ ಕಲಿಸುವವರೆಗೂ "ಗೆಟ್​ಔಟ್​' ಎಂದು ವಿದ್ಯಾ, ಪತಿಯನ್ನೇ ಮನೆಯಿಂದ ಹೊರಗೆ ಹಾಕಿಬಿಡುತ್ತಾಳೆ. ಅಲ್ಲಿಂದ ಸಿದ್ದು ಹಿನ್ನೆಲೆ ತೆರೆದುಕೊಳ್ಳುತ್ತದೆ. ಅಲ್ಲಿ ತಂದೆಯ ಕೋಪ, ತಂಗಿಯ ಪ್ರೀತಿ, ಮಲತಾಯಿಯ ಮಮತೆಯ ಅನಾವರಣವಾಗುತ್ತದೆ. ಅದರ ಜತೆಗೆ ಸಿರಿತನಲ್ಲಿದ್ದಾಗಲೂ ಸಮಸ್ಯೆಯಾಗಿದ್ದ ಜಗ್ಗು, ಸಿದ್ದು ಬಡತನದಲ್ಲೂ ಕಂಟಕವಾಗುತ್ತಾನೆ. ಅದು ಹೇಗೆ? ಜಗ್ಗುಗೆ ಸಿದ್ದು ಪಾಠ ಕಲಿಸುತ್ತಾನಾ? ಮತ್ತೆ ಸಿದ್ದು, ವಿದ್ಯಾ ಒಂದಾಗುತ್ತಾರಾ? "ವಿದ್ಯಾಪತಿ' ನೋಡಿ...

"ವಿದ್ಯಾಪತಿ' ಕಾಮಿಡಿ ಚಿತ್ರವಾದರೂ ಎಲ್ಲ ಎಮೋಷನ್ಸ್​ಗಳೂ ಇವೆ. ಅದೇ ರೀತಿ ನಗಿಸುವುದರ ಜತೆಗೆ ನಾಗಭೂಷಣ ಆ್ಯಕ್ಷನ್​ನಲ್ಲಿ ಅಬ್ಬರಿಸಿ, ಭಾವನಾತ್ಮಕ ಸನ್ನಿವೇಶಗಳಲ್ಲೂ ಮನಸ್ಸು ಮುಟ್ಟುವಂತೆ ಅಭಿನಯಿಸಿದ್ದಾರೆ. ಸೂಪರ್​ಸ್ಟಾರ್​ ವಿದ್ಯಾ ಆಗಿ ಮಲೈಕಾ ಕೂಡ ಗ್ಲಾಮರಸ್​ ಆಗಿ ಮಿಂಚಿದ್ದಾರೆ. ವಿಭಿನ್ನ ವಿಲನ್​ ಪಾತ್ರದಲ್ಲಿ ಗರುಡ ರಾಮ್​, ಅನಕೊಂಡ ಧನಂಜಯ ಪಾತ್ರಗಳು ಗಮನ ಸೆಳೆಯುತ್ತವೆ. "ಅಯ್ಯೋ ವಿಧಿಯೇ' ಮತ್ತು "ಮದನಾರಿ' ಹಾಡುಗಳು ಇಷ್ಟವಾಗುತ್ತವೆ. ಕೆಲಕಾಲ ಥಿಯೇಟರ್​ನಲ್ಲಿ ಕುಳಿತು ನಕ್ಕು ಎಂಜಾಯ್​ ಮಾಡಲು "ವಿದ್ಯಾಪತಿ' ಸೂಕ್ತ ಆಯ್ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net