ನಾ ಮುಂದು ತಾ ಮುಂದು: ಬಿಡುಗಡೆಗೆ ಬಿಗ್​ ಚಿತ್ರಗಳ ಸ್ಪರ್ಧೆ

film
Published on

ಬೇರೆ ದಾರಿಯೇ ಇರಲಿಲ್ಲ. ಯಾವುದೋ ಒಂದೇ ಒಂದು ದಿನಾಂಕಕ್ಕೆ ಕಾದು ಕುಳಿತರೆ ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡ "ಆರ್​ಆರ್​ಆರ್​' ಚಿತ್ರತಂಡ, ಎರಡು ಬಿಡುಗಡೆ ದಿನಾಂಕ ಘೋಷಿಸಿತು. ಕರೊನಾ ಕೇಸ್​ಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಿ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕರೆ ಮಾರ್ಚ್​ 18ಕ್ಕೆ, ಇಲ್ಲವಾದರೆ ಏಪ್ರಿಲ್​ 28ಕ್ಕೆ ಬಿಡುಗಡೆ ಎಂದು ಘೋಷಿಸಿತು. ನಾವೇನು ಕಡಿಮೆ ಎಂದು "ಭೀಮ್ಲಾ ನಾಯಕ್​' ತಂಡ ಸಹ ಇದೇ ದಾರಿ ಹಿಡಿದಿದೆ. ಎಲ್ಲ ಸರಿ ಹೋದರೆ ಫೆಬ್ರವರಿ 25, ಇಲ್ಲವಾದರೆ ಏಪ್ರಿಲ್​ 01 ಅಂತ ಎರಡು ದಿನಾಂಕಗಳನ್ನು ಘೋಷಿಸಿದೆ.

ಚಿತ್ರತಂಡಗಳ ಮಧ್ಯೆ ಪೈಪೋಟಿ: ಇದಕ್ಕೆಲ್ಲ ಕಾರಣ ಕರೊನಾ. ಈಗಾಗಲೇ ಕರೊನಾದಿಂದ ತಡವಾಗಿರುವ ಪ್ಯಾನ್​ ಇಂಡಿಯಾ ಮತ್ತು ನಿರೀತ ಚಿತ್ರಗಳನ್ನು ಇನ್ನಷ್ಟು ತಡ ಮಾಡುವುದಕ್ಕೆ ಆಯಾ ಚಿತ್ರತಂಡಗಳು ತಯಾರಿರಲಿಲ್ಲ. ಯಾವ ಚಿತ್ರದ ಬಿಡುಗಡೆ ದಿನಾಂಕ ಮೊದಲು ಘೋಷಣೆಯಾಗಿ ಬಿಡುತ್ತದೋ ಎಂಬ ಭಯ ಮಿಕ್ಕವರಿಗೆ. ಅದೇ ಕಾರಣಕ್ಕೆ ಕೆಲವು ಚಿತ್ರತಂಡಗಳು ಎರಡೆರಡು ದಿನಾಂಕಗಳನ್ನು ಬುಕ್​ ಮಾಡಿದ್ದವು. ಇದಿಲ್ಲದಿದ್ದರೆ ಅದು, ಅದಿಲ್ಲದಿದ್ದರೆ ಇದು ಎಂದು ಟವಲ್​ ಹಾಕಿ ಬ್ಲಾಕ್​ ಮಾಡಿದ್ದವು. ಇದೆಲ್ಲದರಿಂದ ಯಾವ ಚಿತ್ರ ಯಾವಾಗ ಬರಬಹುದು ಎಂಬ ಗೊಂದಲ ಇನ್ನಷ್ಟು ಹೆಚ್ಚಾಗಿತ್ತು.

ಫೆ. 25ರಿಂದ ಬಿಡುಗಡೆ ಪರ್ವ: ಈ ಗೊಂದಲಗಳು ಕ್ರಮೇಣ ಬಗೆಹರಿಯುತ್ತಿವೆ. ಪ್ರಮುಖವಾಗಿ ದೇಶದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನೊಂದು ಕಡೆ ವೀಕೆಂಡ್​ ಕ್ಯೂರ್, ನೈಟ್​ ಕ್ಯೂಗಳು ರದ್ದಾಗಿ ಬರೀ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಮಾತ್ರ ಉಳಿದಿದೆ. ಅದು ಸಹ ಕೆಲವೇ ದಿನಗಳಲ್ಲಿ ತೆರವಾಗುವ ನಿರೀಕ್ಷೆ ಇರುವುದರಿಂದ, ಈ ತಿಂಗಳ ಕೊನೆಯಿಂದಲೇ ಹಲವು ದೊಡ್ಡ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಫೆ. 25ಕ್ಕೆ ಹಿಂದಿಯ "ಗಂಗೂಬಾಯಿ ಕಥೈವಾಡಿ' ಮತ್ತು ತಮಿಳಿನ "ವಾಲಿಮೈ' ಚಿತ್ರಗಳು ಬಿಡುಗಡೆಯಾಗಲಿವೆ. ಮಾರ್ಚ್​ 11ಕ್ಕೆ ತೆಲುಗಿನ "ರಾಧೇ ಶ್ಯಾಮ್​', ಮಾ. 17ಕ್ಕೆ ಕನ್ನಡದ "ಜೇಮ್ಸ್​', 18ಕ್ಕೆ ಹಿಂದಿಯ "ಬಚ್ಚನ್​ ಪಾಂಡೆ', 25ಕ್ಕೆ "ಆರ್​ಆರ್​ಆರ್​', ಏ.14ಕ್ಕೆ ಕನ್ನಡದ "ಕೆಜಿಎ್​2' ಮತ್ತು ಹಿಂದಿಯ "ಲಾಲ್​ ಸಿಂಗ್​ ಚಡ್ಡಾ', ಏ. 29ಕ್ಕೆ "ಆಚಾರ್ಯ', ಮೇ 12ರಂದು "ಸರ್ಕಾರು ವಾರಿ ಪಾಟ' ಚಿತ್ರಗಳ ಬಿಡುಗಡೆ ಈಗಾಗಲೇ ಘೋಷಣೆಯಾಗಿವೆ. ಇನ್ನು, ಪವನ್​ ಕಲ್ಯಾಣ್​ ಅಭಿನಯದ "ಭೀಮ್ಲಾ ನಾಯಕ್​' ಫೆ. 25ಕ್ಕೆ ಬರಬೇಕೋ, ಏ. 1ಕ್ಕೆ ಬರಬೇಕೋ ಎಂದು ಕಾದು ನೋಡುತ್ತಿದೆ.

ಒಟ್ಟಾರೆ, ಎರಡೆರಡು ಬಾರಿ ಮುಂದೂಡಲ್ಪಟ್ಟಿದ್ದ ಕೆಲವು ಚಿತ್ರಗಳಿಗೆ ಈಗ ಹೊಸ ಬಿಡುಗಡೆ ದಿನಾಂಕಗಳು ಸಿಕ್ಕಿವೆ. ಎರಡು ಬಾರಿ ಮುಂದಕ್ಕೆ ಹೋಗಿದ್ದು, ಮೂರನೆಯ ಬಾರಿಯಾದರೂ ಬಿಡುಗಡೆಯಾಗುತ್ತವಾ? ಉತ್ತರಕ್ಕೆ ಇನ್ನಷ್ಟು ದಿನ ಕಾದು ನೋಡಬೇಕು.

ಕನ್ನಡ ಚಿತ್ರಗಳು ಕದಲಲಿಲ್ಲ

ಇತ್ತೀಚಿನ ದಿನಗಳಲ್ಲಿ ಹಲವು ಚಿತ್ರಗಳ ಬಿಡುಗಡೆಯಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಆದರೆ, ಯಾವುದೇ ಗೊಂದಲವಿಲ್ಲದೇ, ಗಟ್ಟಿಯಾಗಿ ನಿಂತಿದ್ದು ಎಂದರೆ ಅದು "ಜೇಮ್ಸ್​' ಮತ್ತು "ಕೆಜಿಎಫ್‌ 2'. ಈ ಪೈಕಿ "ಜೇಮ್ಸ್​' ಚಿತ್ರವು ಪುನೀತ್​ ಹುಟ್ಟುಹಬ್ಬಕ್ಕೆ (ಮಾರ್ಚ್​ 17) ಬಿಡುಗಡೆಯಾದರೆ, "ಕೆಜಿಎಫ್ 2' ಚಿತ್ರವು ಈ ಹಿಂದೆಯೇ ಘೋಷಣೆಯಾದಂತೆ ಏ.14ರಂದು ಬಿಡುಗಡೆಯಾಗಲಿದೆ. ಇತ್ತ "ರೋಣ'ನ ನಡೆ ಇನ್ನೂ ನಿಗೂಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net