ಮೈಸೂರಿನ ಬೆಡಗಿ ಪ್ರಿಯಾಂಕಾ ‘ಬ್ಯಾಡ್ ಮ್ಯಾನರ್ಸ್’

Priyanka
Published on

ಬೆಂಗಳೂರು: ನಿರ್ದೇಶಕ ಸೂರಿ ಮತ್ತು ಅಭಿಷೇಕ್ ಅಂಬರೀಷ್ ಕಾಂಬಿನೇಷನ್​ನಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೆಲಸಗಳು ಮತ್ತೆ ಶುರುವಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್​ಗೆ ಬ್ರೇಕ್ ಹಾಕಿದ್ದ ತಂಡ ಇದೀಗ ಚಿತ್ರೀಕರಣದತ್ತ ಮುಖ ಮಾಡಿದೆ. ಈ ನಡುವೆ ಅಭಿಷೇಕ್​ಗೆ ಜೋಡಿಯಾಗುವ ಮೂಲಕ ಮೊದಲ ಬಾರಿ ಸ್ಯಾಂಡಲ್​ವುಡ್ ಪ್ರವೇಶಿಸುತ್ತಿರುವ ನಟಿ ಪ್ರಿಯಾಂಕಾ ಕುಮಾರ್ ಸಹ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ.

ಈ ಬಗ್ಗೆ ಸಂಭ್ರಮದಲ್ಲಿಯೇ ಮಾತನಾಡುವ ಅವರು, ‘ಸೂರಿ ಅವರೊಂದಿಗೆ ಸಿನಿಮಾ ಮಾಡಬೇಕೆಂಬುದು ಎಲ್ಲರ ಕನಸು. ಆ ನನ್ನ ಕನಸೀಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮೂಲಕ ಈಡೇರುತ್ತಿದೆ. ಮೊದಲ ಚಿತ್ರದಲ್ಲಿಯೇ ಹೊಸ ತರಹದ ಪಾತ್ರ ಸಿಕ್ಕಿದೆ. ಈ ಮೊದಲು ಒಂದು ದಿನದ ಶೂಟಿಂಗ್​ನಲ್ಲಿ ಮಾತ್ರ ನಾನು ಭಾಗವಹಿಸಿದ್ದೇನೆ. ಆಗಸ್ಟ್​ನಿಂದ ಚಿತ್ರೀಕರಣ ಶುರುವಾಗಲಿದೆ. ತಂಡ ಸೇರಿಕೊಳ್ಳಲು ಕಾಯುತ್ತಿರುವೆ’ ಎನ್ನುವ ಪ್ರಿಯಾಂಕಾ, ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿಯೇ ಮುಂದುವರಿಯುವ ಯೋಜನೆ ಹಾಕಿದ್ದಾರೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ರಚಿತಾ ರಾಮ್ ನಟಿಸಲಿದ್ದಾರೆ, ಅವರೇ ನಾಯಕಿ ಎಂದು ಹೇಳಲಾಗಿತ್ತು. ಆದರೆ, ವಿಷಯ ಏನೆಂದರೆ ರಚಿತಾ ವಿಶೇಷ ಪಾತ್ರವೊಂದರಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಅದನ್ನು ಹೊರತುಪಡಿಸಿದರೆ, ಪ್ರಿಯಾಂಕಾ ಕುಮಾರ್ ಅಭಿಷೇಕ್​ಗೆ ಜೋಡಿಯಾಗಿರಲಿದ್ದಾರೆ. ಸುಧೀರ್ ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net