ಮುತ್ತಪ್ಪ ರೈ ಬಯೋಪಿಕ್​: ರವಿ ಶ್ರೀವತ್ಸ ಹೊಸ ಚಿತ್ರ ಎಂಆರ್

MR
Published on

ಬೆಂಗಳೂರು: ಒಂದು ಕಾಲದ ಡಾನ್ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಕುರಿತ ಬಯೋಪಿಕ್ ಅಂತೂ ಶುರುವಾಗಿದೆ. ಈ ಚಿತ್ರಕ್ಕೆ ‘ಎಂಆರ್’ ಎಂದು ಹೆಸರಿಡಲಾಗಿದ್ದು, ಗುರುವಾರ ರಾಮನಗರದಲ್ಲಿ ಫೋಟೋಶೂಟ್ ಆಗಿದೆ. ರವಿ ಶ್ರೀವತ್ಸ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವು ಮೂರು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಜನವರಿಯಲ್ಲಿ ಪ್ರಾರಂಭವಾಗಿ 2021ರ ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮುತ್ತಪ್ಪ ರೈ ಅವರನ್ನಾಧರಿಸಿದ ಪಾತ್ರಗಳು ‘ಓಂ’, ‘ಚಕ್ರವರ್ತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಂದಿವೆಯಾದರೂ, ಅವರ ಜೀವನವನ್ನಾಧರಿಸಿದ ಯಾವ ಚಿತ್ರ ಇದುವರೆಗೂ ಬಂದಿರಲಿಲ್ಲ. ರೈ ಕುರಿತು ಬಯೋಪಿಕ್ ಮಾಡಬೇಕು ಎಂಬ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ದರ್ಶನ್ ಅಭಿನಯದಲ್ಲಿ ನಿರ್ವಪಕ ಧನರಾಜ್ ಆ ಚಿತ್ರ ನಿರ್ಮಾಣ ಮಾಡುವುದಕ್ಕೆ ಮುಂದಾದರು. ಚಿತ್ರದ ಪತ್ರಿಕಾಗೋಷ್ಠಿಯಾದರೂ ಸೆಟ್ಟೇರಲಿಲ್ಲ. ಇನ್ನು ಸುದೀಪ್ ಅಭಿನಯದಲ್ಲಿ ರಾಮ್ೋಪಾಲ್ ವರ್ಮ, ‘ಅಪ್ಪ’ ಎಂಬ ಹೆಸರಿನಲ್ಲಿ ಬಯೋಪಿಕ್ ಮಾಡುವುದಾಗಿ ಹೇಳಿದರು. ಕೊನೆಗೆ ಸುದೀಪ್ ಬದಲು ವಿವೇಕ್ ಒಬೆರಾಯ್ ಬಂದರೂ, ಚಿತ್ರ ಮಾತ್ರ ಮುಂದುವರೆಯಲಿಲ್ಲ.

ಈಗ ರವಿ ಶ್ರೀವತ್ಸ ಈ ಚಿತ್ರಕ್ಕೆ ಕೈಹಾಕಿದ್ದು, ರೈ ಕುರಿತು ಸಿನಿಮಾ ಮಾಡುವುದು ಅವರ 20 ವರ್ಷಗಳ ಕನಸಾಗಿತ್ತಂತೆ. ಆ ಕನಸು ನನಸು ಮಾಡುತ್ತಿರುವುದು ನಿರ್ವಪಕ ಶೋಭಾ ರಾಜಣ್ಣ. ರವಿ ನಿರ್ದೇಶನದ ‘ಡೆಡ್ಲಿ ಸೋಮ’ ಚಿತ್ರವನ್ನು ನಿರ್ವಿುಸಿದ್ದ ರಾಜಣ್ಣ, ಇದೀಗ ‘ಎಂಆರ್’ ನಿರ್ವಿುಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮಗ ದೀಕ್ಷಿತ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದು, ರೈ ಅವರ ಯೌವ್ವನದ ಪಾತ್ರ ಮಾಡುತ್ತಿದ್ದಾರೆ. ಈ ಕಥೆಯನ್ನು ರವಿ, ಕೆಲವು ವರ್ಷಗಳ ಹಿಂದೆಯೇ ಮುತ್ತಪ್ಪ ರೈಗೆ ಹೇಳಿದ್ದರಂತೆ. ರೈ ಸಹ ಮೆಚ್ಚಿಕೊಂಡು ಹಲವು ವಿಷಯಗಳನ್ನು ಹೇಳಿದ್ದರಂತೆ. ಅವನ್ನೆಲ್ಲಾ ಸೇರಿಸಿ ರವಿ ಈಗ ‘ಎಂಆರ್’ ಚಿತ್ರಕ್ಕೆ ಚಾಲನೆ ನೀಡಿದ್ದು, ರೈ ಕುರಿತು ಸಿನಿಮಾ ಮಾಡುತ್ತಿರುವುದಾಗಿ ಅವರ ಕುಟುಂಬದವರಿಗೂ ತಿಳಿಸಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net