ಮ್ಯೂಟ್ ಎಂದರೂ ಭಾರಿ ಸದ್ದು; ರವೀನಾ ಟಂಡನ್​ರಿಂದ ಬಿಡುಗಡೆ ಆಯ್ತು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಟ್ರೇಲರ್

Mute
ರವೀನಾ ಟಂಡನ್, ಅರ್ಚನಾ ಜೋಯಿಸ್
Published on

ಬೆಂಗಳೂರು: ಈ ಸಿನಿಮಾದ ಹೆಸರೇ ಮ್ಯೂಟ್​, ಆದರೂ ಇದೀಗ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾದ ಟ್ರೇಲರನ್ನು ಬಾಲಿವುಡ್​ ನಟಿ ರವೀನಾ ಟಂಡನ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅವರು ಇದೇ ಮೊದಲು ಕನ್ನಡ ಸಿನಿಮಾ ಟ್ರೇಲರೊಂದನ್ನು ಬಿಡುಗಡೆ ಮಾಡಿದಂತಾಗಿದೆ.

"#ಮ್ಯೂಟ್" ಶೀರ್ಷಿಕೆಯ ಈ ಕನ್ನಡ ಸಿನಿಮಾ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲೂ ತೆರೆ ಕಾಣಲಿದ್ದು, ಈ ಐದೂ ಭಾಷೆಗಳ ಟ್ರೇಲರನ್ನು ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡಿದ್ದಾರೆ.

'ಕೆಜಿಎಫ್' ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅರ್ಚನಾ ಜೋಯಿಸ್ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ತಮಿಳಿನ ಖ್ಯಾತ ನಟ ಆಡುಕಲಂ ನರೇನ್ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಮುಂಗಾರುಮಳೆ-2 ಖ್ಯಾತಿಯ ಜಿ. ಗಂಗಾಧರ್ ತಮ್ಮ ಇ.ಕೆ.ಫಿಕ್ಚರ್ಸ್ ಬ್ಯಾನರ್‌ನಲ್ಲಿ "#ಮ್ಯೂಟ್" ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರು ಮುಂಗಾರು ಮಳೆ ಮತ್ತು ಮೊಗ್ಗಿನ ಮನಸು ಚಿತ್ರಗಳಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು. ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಅವರೊಂದಿಗೆ ಮುಂಗಾರುಮಳೆ-2ರಲ್ಲಿ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ತೇಜಸ್ ಪಬ್ಲಿಕೇಷನ್ ಡಿಜಿಟಲ್ ತಂತ್ರಗಳನ್ನು ರೂಪಿಸಿದ್ದಾರೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಿಷಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದರೆ, ಡಾಲಿ ಧನಂಜಯ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಚಿತ್ರ ರೋಚಕ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net