

ಬೆಂಗಳೂರು: ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಸಂಗೀತ ನಿರ್ದೇಶಕ, ಗಾಯಕ, ಕಂಠದಾನ ಕಲಾವಿದನಾಗಿ ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಛಾಪು ಮೂಡಿಸಿದವರು ಕಾರ್ತಿಕ್ ಶರ್ಮಾ. ಇದೀಗ ನಾಯಕ, ನಿರ್ದೇಶಕ, ನಿರ್ಮಾಪಕನಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಚಿತ್ರದ ಹೆಸರು "ಭಾವಾಂತರ'. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಸಕ್ಸಸ್ ಆಗಿವೆ. ವಿಶೇಷ ಅಂದರೆ ಕಾರ್ತಿಕ್ ಈ ಚಿತ್ರದಲ್ಲಿ ಯುವಕ ಮತ್ತು ಮಂಗಳಮುಖಿಯಾಗಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. "ನನಗೆ ಮೊದಲಿನಿಂದಲೂ ನಿರ್ದೇಶನದ ಆಸೆಯಿತ್ತು. ಸಂಗೀತ ಮತ್ತು ನಟನೆಯಲ್ಲಿ ಪಳಗಿದ್ದರೂ ನಿರ್ದೇಶಕನಾಗಲು ಕಲಿಕೆ ಬೇಕಿತ್ತು. ಕೆಲ ಮ್ಯೂಸಿಕ್ ವಿಡಿಯೋಗಳನ್ನು ನಿರ್ದೇಶಿಸಿ, ಹಿಂದಿ ಚಿತ್ರಗಳ ಪ್ರಿ&ಪ್ರೊಡಕ್ಷನ್ನಲ್ಲಿ ಕೆಲಸ ಮಾಡಿ ಅನುಭವ ಪಡೆದೆ. ಫಿಲಂ ಮೇಕಿಂಗ್ ಓದಿಕೊಂಡೆ. ನನಗೆ ರಿಯಲಿಸ್ಟಿಕ್ ಕಥೆಗಳನ್ನು ಹೇಳುವುದು ಇಷ್ಟ. ಇವತ್ತಿನ ಪೀಳಿಗೆಗೆ ನಮ್ಮ ಸಂಸತಿ ಮತ್ತು ಪ್ರಸಕ್ತ ಸಾಮಾಜಿಕ ವಿಷಯಗಳನ್ನು ಹೇಳಲು ಈ ಕಥೆ ಉತ್ತಮ ಅಂತನ್ನಿಸಿತು' ಎಂದು ಮಾಹಿತಿ ನೀಡುತ್ತಾರೆ ಕಾರ್ತಿಕ್. ಕಾರ್ತಿಕ್ ಜತೆ ತನ್ವಿ ರಾವ್, ಅಭಿಮನ್ಯು, ಪ್ರಣವ್, ವೈಷ್ಣವ್ ಮುಖ್ಯ ಭೂಮಿಕೆಯಲ್ಲಿದ್ದು, ಸದ್ಯ "ಭಾವಾಂತರ' ಸೆನ್ಸಾರ್ ಹಂತದಲ್ಲಿದೆ.
ಚಿತ್ರಕ್ಕಾಗಿ ತುಂಬ ರೀಸರ್ಚ್ ಮಾಡಿರುವ ಕಾರ್ತಿಕ್, "ಎಲ್ಲ ವಯೋಮಾನದ ಮಂಗಖಳಮುಖಿಯರನ್ನೂ ಭೇಟಿಯಾಗಿ, ಕೆಲ ದಿನಗಳ ಕಾಲ ಅವರೊಂದಿಗೆ ವಾಸ ಮಾಡಿ, ಅವರ ಜೀವನದ ಬಗ್ಗೆ ತಿಳಿದುಕೊಂಡೆ. ಮಂಗಳಮುಖಿ ಎಂದು ಗೊತ್ತಾದ ತಕ್ಷಣ ಬಹುತೇಕರನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ. ಎಷ್ಟೋ ಮಂಗಳಮುಖಿಯರು ಚೆನ್ನಾಗಿ ಓದಿಕೊಂಡಿದ್ದರೂ, ಶ್ರೀಮಂತ ಕುಟುಂಬಗಳಿಂದ ಬಂದಿದ್ದರೂ ಭಿಕ್ಷೆ ಬೇಡುತ್ತಿರುತ್ತಾರೆ. ಆರ್ಥಿಕ, ಮಾನಸಿಕ, ಸಾಮಾಜಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ತುಂಬ ಕಷ್ಟಪಡುತ್ತಾರೆ. ಅಂತಹ ಹಲವು ಮಂಗಳಮುಖಿಯರ ನೈಜ ಘಟನೆಗಳನ್ನಿಟ್ಟುಕೊಂಡು "ಭಾವಾಂತರ' ಮಾಡಿದ್ದೇವೆ' ಎನ್ನುತ್ತಾರೆ.
ಪ್ರತಿ ವರ್ಷ ತಮಿಳುನಾಡಿನಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಮಂಗಳಮುಖಿಯರ ಹಬ್ಬದಲ್ಲಿ ಶೂಟಿಂಗ್ ನಡೆಸಿರುವ ಕಾರ್ತಿಕ್, "ಶೇಕಡಾ 80ರಷ್ಟು ಭಾರತೀಯರಿಗೆ ಈ ಹಬ್ಬದ ಬಗ್ಗೆ ಗೊತ್ತಿಲ್ಲ. 18 ದಿನಗಳ ಕಾಲ ನಡೆಯುವ ಹಬ್ಬ ಈ ಹಬ್ಬಕ್ಕೆ ಮಹಾಭಾರತದ ಹಿನ್ನೆಲೆಯಿದೆ. ಅದರಲ್ಲಿ ಮೂರು ದಿನ ಲಾಂತರ ಮಂಗಳಮುಖಿಯರು ಪಾಲ್ಗೊಳ್ಳುತ್ತಾರೆ. ಮೂರು ವರ್ಷ ಅಲ್ಲಿಗೆ ಹೋಗಿ, ಮೊದಲ ವರ್ಷ ಹಬ್ಬದ ಹಿನ್ನೆಲೆ, ಆಚರಣೆ ಬಗ್ಗೆ ತಿಳಿದು, ಎರಡನೇ ಬಾರಿ ಚಿತ್ರೀಕರಣ ಪ್ಲ್ಯಾನ್ ಮಾಡಿಕೊಂಡೆ. ನಂತರ ಮೂರನೇ ವರ್ಷ ಹೋಗಿ ಶೂಟಿಂಗ್ ನಡೆಸಿದೆವು' ಎಂದು ಹೇಳಿಕೊಳ್ಳುತ್ತಾರೆ.