

ಬೆಂಗಳೂರು: ಕನ್ನಡದ ‘ಯದಾ ಯದಾ ಹಿ ಧರ್ಮಸ್ಯ’, ‘ಬಿಂದಾಸ್ ಗೂಗ್ಲಿ’ ಖ್ಯಾತಿಯ ನಟಿ ಮಮತಾ ರಾಹುತ್ ಕಳೆದ ವರ್ಷ ‘ತಾರಿಣಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮಮತಾ ರಾಹುತ್ ‘ಮುರುಗ ಸನ್ ಆಫ್ ಕಾನೂನು’ ಚಿತ್ರದಲ್ಲಿ ನಟಿಸಿದ್ದು, ಇದೇ 29ರಂದು ರಿಲೀಸ್ ಆಗಲಿದೆ. ಇಲ್ಲಿ ಮಮತಾ ಹಳ್ಳಿ ಹುಡುಗಿ ಪಾತ್ರದಲ್ಲಿದ್ದು, ‘‘ಮುರುಗ ಸನ್ ಆಫ್ ಕಾನೂನು’ ಒಂದು ಎಂಟರ್‌ಟೈನಿಂಗ್ ಸಿನಿಮಾ. ಇಲ್ಲಿ ನಾಯಕ ಮುರುಗನ ಬದುಕಿನ ಹೋರಾಟ ಹಾಗೂ ರಾಜಕೀಯ ಸಂಘರ್ಷವಿದೆ. ನಾನಿಲ್ಲಿ ನಾಯಕನ ಪ್ರೇಯಸಿ ನಂದಿನಿ ಪಾತ್ರದಲ್ಲಿ ನಟಿಸಿದ್ದೇನೆ. ಆತನ ಎಲ್ಲ ಹೋರಾಟವನ್ನು ಬೆಂಬಲಿಸುವ ನಾನು, ಪ್ರೀತಿಯ ವಿಚಾರದಲ್ಲಿ ಆತನ ಒಲವು ಪಡೆಯುತ್ತೀನಾ ಇಲ್ಲವಾ ಎನ್ನುವುದೇ ಪಾತ್ರದ ಟ್ವಿಸ್ಟ್. ಈ ಸಿನಿಮಾಕ್ಕಾಗಿ ಕೊಡೆಮುರುಗ ಬದ್ಧರಾಗಿ ಕೆಲಸ ಮಾಡಿದ್ದಾರೆ. ಎಷ್ಟೇ ಕಷ್ಟ ಬಂದರೂ, ಪುನೀತ್ ಸರ್ ಚಿತ್ರವನ್ನು ಮೆಚ್ಚಿಕೊಂಡಿದ್ದರು ಎಂಬ ಕಾರಣಕ್ಕೆ ಸಿನಿಮಾ ಪೂರ್ಣಗೊಳಿಸಿದ್ದಾರೆ. ತುಂಬಾ ದಿನಗಳ ಬಳಿಕ ನನ್ನನ್ನು ನಾನೇ ತೆರೆ ಮೇಲೆ ನೋಡುವ ಕಾತರವಿದೆ. ಮದುವೆಯಾಗಿದ್ದರೂ ಚಿತ್ರರಂಗದಲ್ಲಿದ್ದೆ. ಆದರೆ, ಮಗ ಜನಿಸಿದ ಬಳಿಕ ಆತನ ಆರೈಕೆಗೆ ಸ್ವಲ್ಪ ಬಿಡುವು ಪಡೆದುಕೊಂಡಿದ್ದೇನೆ. ಈ ಸಿನಿಮಾ ಬಳಿಕ ನಮ್ಮದೇ ಬ್ಯಾನರಡಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮೂಡಿಬರಲಿದೆ. ನನ್ನನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದ ಪನ್ನ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ನಾನೂ ನಟಿಸಲಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡರು.