

ಮುಂಬೈ: ಸದಾ ವಿವಾದಗಳಿಂದ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್ ಅನ್ನು ವರ್ಮಾ ಅವರು ಇತ್ತಿಚೆಗಷ್ಟೇ ಬಿಡುಗಡೆ ಮಾಡಿದ್ದರು. ಪೋಸ್ಟರ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಕಾನೂನು ಹೋರಾಟ ಎದುರಿಸುವಂತಾಗಿದೆ.
ಆರ್ಜಿವಿ ನಿರ್ದೇಶಿಸುತ್ತಿರುವ ಮರ್ಡರ್ ಚಿತ್ರಕ್ಕೆ ಪ್ರಣಯ್ ತಂದೆ ಬಾಲಾಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆರ್ಜಿವಿ ಚಿತ್ರ ಪ್ರಣಯ್ ಕೊಲೆ ಪ್ರಕರಣದ ಮೇಲೆ ಪರಿಣಾಮ ಬೀಳಲಿದೆ ಎಂದು ಪ್ರಣಯ್ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದೆ.
ಬಾಲಾಸ್ವಾಮಿ ಅವರ ಅರ್ಜಿ ಪುರಸ್ಕರಿಸಿದ ನಲ್ಗೊಂಡ ವಿಶೇಷ ಪರಿಶಿಷ್ಟ ವರ್ಗ/ಪಂಗಡ ನ್ಯಾಯಾಲಯ, ಮಿರಿಯಾಲಗುಡ ಪೊಲೀಸ್ ಠಾಣೆಗೆ ನಿರ್ದೇಶಕ ಆರ್ಜಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿದೆ.
ಕಳೆದ ಅಪ್ಪಂದಿರ ದಿನದಿಂದು ಆರ್ಜಿವಿ "ಮರ್ಡರ್" ಹೆಸರಿನ ಮುಂದಿನ ಚಿತ್ರದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ವರ್ಮಾ, ಅಮೃತಾ ರಾವ್ ಹಾಗೂ ಮಾರುತಿ ರಾವ್ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್ ಬಿಡುಗಡೆ ಮಾಡಿ, ಸ್ಯಾಡ್ ಫಾದರ್ಸ್ ಡೇ ಎಂದು ಬರೆದುಕೊಂಡಿದ್ದರು.
ಇದೊಂದು ನೈಜ ಘಟನೆಯ ಕುಟುಂಬ ಆಧಾರಿತ ಚಿತ್ರವಾಗಿದೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದ್ದು, ತಂದೆ ಮಗಳ ಪಾತ್ರಗಳನ್ನು ಪರಿಚಯಿಸಲಾಗಿತ್ತು. ಇದು ಅಮೃತಾ ಮತ್ತು ಮಾರುತಿ ರಾವ್ ನಿಜ ಜೀವನಾಧಾರಿತ ಚಿತ್ರವಾಗಿದ್ದು, ಇದರಲ್ಲಿ ಮಾರುತಿ ರಾವ್, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತನ್ನ ಮಗಳ ಪತಿ ಪ್ರಣಯ್ನನ್ನು ಕೊಲ್ಲಲು ಸುಪಾರಿ ನೀಡಿದ ಆಧಾರದ ಮೇಲೆ ಚಿತ್ರಕತೆ ಸಾಗಲಿದೆ.
ಮಗಳ ಮೇಲಿನಾ ಅತಿಯಾದ ಪ್ರೀತಿಯೇ ಕೊಲೆಗೆ ಕಾರಣ ಎಂದು ವರ್ಮಾ ಹೇಳಿರುವದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಮಗಳ ಸೊಕ್ಕಿನ ವರ್ತನೆಯೇ ಕೊಲೆಗೆ ಪುಷ್ಠಿ ನೀಡಿದೆ ಎಂದು ವರ್ಮಾ ಸಮರ್ಥನೆ ನೀಡಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು.
ನೆಟ್ಟಿಗರೊಬ್ಬರು ಟ್ವೀಟ್ ಮಾಡಿ, ಮರ್ಯಾದೆ ಹತ್ಯೆಯ ಸ್ಟೋರಿಯನ್ನು ಅಪ್ಪ-ಮಗಳ ಪ್ರೀತಿಯ ಸಂಬಂಧವೆಂದು ಹೇಳಲು ವರ್ಮಾ ಹೊರಟಿದ್ದಾರೆ ಎಂದು ಟೀಕಿಸಿದ್ದರು. ಮತ್ತೊರ್ವ ನೆಟ್ಟಿಗ, ಇದೊಂದು ಮರ್ಯಾದೆ ಹತ್ಯೆ. ಸ್ಟೋರಿಯ ಎಳೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ ಎಂದು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇನ್ನು ಸಿನಿಮಾ ವಿಮರ್ಶಕ ಸಂಕೀರ್ತನ ವರ್ಮಾ ಅವರು ಟ್ವೀಟ್ ಮಾಡಿ, ಇದು ಖಂಡಿತ ಪ್ರೀತಿಯಲ್ಲ. ಇದೊಂದು ಜಾತಿಯ ವ್ಯಾಮೋಹದಿಂದ ಆದ ಮರ್ಯಾದೆ ಹತ್ಯೆ. ಇದೊಂದು ಪೂರ್ವ ನಿಯೋಜಿತ ರಕ್ತಸಿಕ್ತ ಕೊಲೆ. ಪ್ರಣಯ್ ವ್ಯಕ್ತಿತ್ವವನ್ನು ಕೊಲ್ಲಲು ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೃತಾ ತಂದೆಯೊಂದಿಗಿನ ಸಂಬಂಧವನ್ನು ಬಹಿರಂಗವಾಗಿ ಕಡಿದ ನಂತರವೂ. ನೀವು ತಂದೆ-ಮಗಳ ನಡುವಿನ ಪ್ರೀತಿಯ ಬಗ್ಗೆ ಹೇಳ ಹೊರಟಿರುವುದು ನಾಚಿಕೆಗೇಡು ಎಂದು ಜರಿದಿದ್ದರು. ಹೀಗೆ ಸಾಕಷ್ಟು ಕಾಮೆಂಟ್ಗಳು ವರ್ಮಾ ವಿರುದ್ಧ ಕೇಳಿಬಂದಿವೆ.
ಪ್ರಣಯ್ ಹತ್ಯೆ ಹಿನ್ನೆಲೆ
ಪ್ರಣಯ್ ದಲಿತ ಸಮುದಾಯದವನಾಗಿದ್ದ, ಅಮೃತಾ ಪ್ರಭಾವಿ ವೈಶ್ಯ ಸಮುದಾಯವಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ಮಾರುತಿ ರಾವ್ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ಹೇಳಲಾಗಿದೆ. ಸೆಪ್ಟೆಂಬರ್ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. (ಏಜೆನ್ಸೀಸ್)