

ಬೆಂಗಳೂರು: ಕಳೆದ ವರ್ಷ ಹೆಚ್ಚೂಕಡಿಮೆ ಇದೇ ಸಮಯದಲ್ಲಿ ಪುಲ್ವಾಮಾ ದಾಳಿ ಹಾಗೂ ಮೇಜರ್ ಅಭಿನಂದನ್ ಸಾಹಸದ ವಿಷಯ ದೇಶಾದ್ಯಂತ ಭಾರಿ ಸುದ್ದಿಯಲ್ಲಿತ್ತು. ಇದೀಗ ಒಂದು ವರ್ಷದ ಬಳಿಕ ಮತ್ತೆ ಅದೇ ಅಭಿನಂದನ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ‘..ಕುರುಕ್ಷೇತ್ರ’.
ಹೌದು.. ಮುನಿರತ್ನ ನಿರ್ವಣದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ಶತದಿನೋತ್ಸವ ಸಮಾರಂಭ ಇಂಥದ್ದೊಂದು ವಿಷಯಕ್ಕೆ ವೇದಿಕೆ ಆಗಿದೆ. ತಮ್ಮ ಚಿತ್ರ ನೂರು ದಿನಗಳ ಪ್ರದರ್ಶನ ಪೂರೈಸಿರುವುದು ಹಾಗೂ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶತದಿನೋತ್ಸವ ಸಮಾರಂಭ ಮತ್ತು ಜಾಗರಣೆ ಕಾರ್ಯಕ್ರಮ ಎರಡನ್ನೂ ಶುಕ್ರವಾರ ರಾತ್ರಿ ಬೆಂಗಳೂರಿನ ಮತ್ತಿಕೆರೆಯ ಜೆ.ಪಿ.ಪಾರ್ಕ್ ಹಾಗೂ ಲಗ್ಗೆರೆಯ ಡಾ.ವಿಷ್ಣುವರ್ಧನ್ ಆಟದ ಮೈದಾನದಲ್ಲಿ ಅವರು ಒಟ್ಟಿಗೇ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ‘..ಕುರುಕ್ಷೇತ್ರ’ ಸಿನಿಮಾತಂಡದ ಹಲವರನ್ನು ಆಹ್ವಾನಿಸಿ ಭಕ್ತಿ ಹಾಗೂ ಮನರಂಜನೆ ಮಿಶ್ರಿತ ಸಮಾರಂಭ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ‘ನಟ ದರ್ಶನ್ ಇದುವರೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸೇರಿ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಆದರೆ ಅವರು ಹಿಂದೆಂದೂ ಕಾಣಿಸಿರದಂಥ ಪಾತ್ರವೊಂದರಲ್ಲಿ ಅಭಿನಯಿಸಬೇಕು ಎಂಬುದು ನನ್ನ ಆಸೆ. ಅದರಲ್ಲೂ ಅವರನ್ನು ಸೈನಿಕನಾಗಿ, ಮೇಜರ್ ಪಾತ್ರದಲ್ಲಿ ನೋಡಬೇಕು. ಅದಕ್ಕಾಗಿ ಮೇಜರ್ ಅಭಿನಂದನ್ ಅವರ ಜೀವನಾಧಾರಿತ ಸಿನಿಮಾ ಮಾಡಲಿದ್ದೇನೆ. ಪುಲ್ವಾಮಾ ದಾಳಿ ಬಳಿಕ ಶತ್ರು ದೇಶದ ಸೈನಿಕರಿಗೆ ಸೆರೆ ಸಿಕ್ಕೂ ಅಲ್ಲಿಂದ ವೀರೋಚಿತವಾಗಿ ಮರಳಿದ ಅಭಿನಂದನ್ ಅವರ ಪಾತ್ರವನ್ನು ದರ್ಶನ್ ಮಾಡಲಿದ್ದು, ಆ ಮೂಲಕ ಭಾರತವೇ ತಿರುಗಿ ನೋಡುವಂಥ ಸಿನಿಮಾ ಮಾಡಲಿದ್ದೇನೆ’ ಎಂಬುದಾಗಿ ಮುನಿರತ್ನ ಹೇಳಿದರು. ನಿರ್ದೇಶಕ ನಾಗಣ್ಣ, ದರ್ಶನ್, ರವಿಶಂಕರ್, ಶ್ರೀನಿವಾಸಮೂರ್ತಿ, ರಮೇಶ್ ಭಟ್ ಸೇರಿ ‘..ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸಿದ್ದ ಕಲಾವಿದರನೇಕರು ಇದರಲ್ಲಿ ಪಾಲ್ಗೊಂಡಿದ್ದರು. ಜೆ.ಪಿ.ಪಾರ್ಕ್, ವಿಷ್ಣುವರ್ಧನ್ ಆಟದ ಮೈದಾನ ಎರಡೂ ಕಡೆ ನಡೆದ ಈ ಕಾರ್ಯಕ್ರಮಕ್ಕೆ ಕೆಲಗಂಟೆಗಳ ಕಾಲ ಸ್ಟಾರ್ ಕಳೆ ಕೂಡ ಇತ್ತು. ಬಳಿಕ ಬೆಳಗಿನ ವರೆಗೂ ಕಾರ್ಯಕ್ರಮ ಮುಂದುವರಿದಿದ್ದು, ಶಿವರಾತ್ರಿ ಹಾಗೂ ಕುರುಕ್ಷೇತ್ರ ಶತದಿನೋತ್ಸವ ಹಿನ್ನೆಲೆಯಲ್ಲಿ ಭಕ್ತಿ-ಮನರಂಜನೆ ಸಹಿತ ಜಾಗರಣೆ ನೆರವೇರಿತು.
ನನಗೆ ವಿಲನ್ ಪಾತ್ರ ನೀಡಿ
‘ನಿಮ್ಮ ನಿರ್ವಣದ ಸಿನಿಮಾದಲ್ಲಿ ನನ್ನ ತಂದೆ ಅಂಬರೀಷ್-ದರ್ಶನ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅಮ್ಮ ಸುಮಲತಾ ಕೂಡ ಅಭಿನಯಿಸಿದ್ದಾರೆ. ಆದರೆ ನಿಮ್ಮ ಚಿತ್ರದಲ್ಲಿ ಅವರೆಲ್ಲರೊಂದಿಗೆ ಏಕೆ ನನಗೂ ಅವಕಾಶ ಕೊಡಲಿಲ್ಲ. ಮುಂದೆ ನೀವು ದರ್ಶನ್ ಅವರ ಸಿನಿಮಾ ನಿರ್ವಿುಸಿ, ಅದರಲ್ಲಿ ನನಗೊಂದು ವಿಲನ್ ಪಾತ್ರ ನೀಡಿ’ ಎಂದು ಮುನಿರತ್ನ ಅವರಲ್ಲಿ ನಟ ಅಭಿಷೇಕ್ ಕೇಳಿಕೊಂಡರು. ತಮ್ಮ ಹೊಸ ಸಿನಿಮಾ ಬಗ್ಗೆ ಮಾತನಾಡುವಾಗ ಮುನಿರತ್ನ ಅವರು ಅಭಿಷೇಕ್ ಮಾತಿಗೂ ಪ್ರತಿಕ್ರಿಯೆಯಾಗಿ ಭರವಸೆ ನೀಡಿದರು. ‘ದರ್ಶನ್ ನಾಯಕತ್ವದಲ್ಲಿ ಅಭಿನಂದನ್ ಅವರ ಜೀವನಾಧಾರಿತವಾಗಿ ಮೂಡಿಬರಲಿರುವ ಸಿನಿಮಾದಲ್ಲಿ ಅಭಿಷೇಕ್ ಕೂಡ ಇರಲಿದ್ದಾರೆ’ ಎಂದು ಮುನಿರತ್ನ ಹೇಳಿದರು.