

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕಿದ 'ಮುಂಗಾರು ಮಳೆ' ಚಿತ್ರ ಇಂದಿಗೆ 14 ವರ್ಷ ಪೂರೈಸಿ, 15ಕ್ಕೆ ಕಾಲಿಟ್ಟಿದೆ. 2006ರ ಡಿಸೆಂಬರ್ 29ರಂದು ಈ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ಗಣೇಶ್ ಅವರ ವೃತ್ತಿಬದುಕಿಗೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳ ಹೊಸ ಟ್ರೆಂಡ್ ಹುಟ್ಟುಹಾಕಿತ್ತು.
ಇದೀಗ ಚಿತ್ರವು 14 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಯೋಗರಾಜ್ ಭಟ್ ಮತ್ತು ಗಣೇಶ್ ಇಬ್ಬರೂ ನೆನಪಿಸಿಕೊಂಡಿದ್ದಾರೆ. ಚಿತ್ರಕ್ಕಷ್ಟೇ ಅಲ್ಲ, ತಮ್ಮಿಬ್ಬರಿಗೂ ಒಂದು ರೀತಿಯ ಹುಟ್ಟುಹಬ್ಬ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಮುಂಗಾರು ಮಳೆ, ಜನತೆ ಮತ್ತು ಜೀವನಕ್ಕೆ ಜೈಕಾರ ಹಾಕಿದ್ದಾರೆ.
ಪತ್ರ ಬರೆದು ಟ್ವೀಟ್ ಮಾಡಿರುವ ಭಟ್ ಮತ್ತು ಗಣೇಶ್, 'ನಾವಿಬ್ಬರೂ, ಜೊತೆಗೆ ಇಡೀ ತಂದ ಅದೇ ತಾನೇ ಕಣ್ತೆರೆದ ಶಿಶುಗಳಂತೆ 'ಮುಂಗಾರು ಮಳೆ' ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ. ಚಿತ್ರಕ್ಕಷ್ಟೇ ಅಲ್ಲದೇ, ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ ... ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು. ಜೈ ಮುಂಗಾರು ಮಳೆ ... ಜೈ ಜನತೆ ... ಜೈ ಜೀವನ ... - ನಿಮ್ಮವರು ಗಣಪ - ಯೋಗ್ರಾಜ್ ಭಟ್' ಎಂದು ಹೇಳಿಕೊಂಡಿದ್ದಾರೆ.