mr. rani movie review: ಹೀರೋಯಿನ್ ಒಳಗಿನ ಹೀರೋ ಕನಸು

rani
Published on

ಚಿತ್ರ: ಮಿಸ್ಟರ್ ರಾಣಿ

ನಿರ್ದೇಶನ: ಮಧುಚಂದ್ರ

ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್, ಶ್ರೀವತ್ಸ ಶ್ಯಾಮ್, ಮಧುಚಂದ್ರ ಮತ್ತಿತರರು.

ಶಿವ ಸ್ಥಾವರಮಠ

ಚಿಕ್ಕಂದಿನಿಂದಲೂ ದೊಡ್ಡ ಸ್ಟಾರ್ ಆಗಬೇಕು ಎಂದು ಕನಸು ಕಂಡವನು ರಾಜ (ದೀಪಕ್ ಸುಬ್ರಹ್ಮಣ್ಯ). ಆತನ ಹೀರೋ ಕನಸಿಗೆ ಅಪ್ಪನೇ ವಿಲನ್. ಮಗ ಚೆನ್ನಾಗಿ ಓದಿ ಇಂಜಿನಿಯರ್ ಆಗಬೇಕೆಂಬುದು ಅವರ ಕನಸು. ಆದರೆ, ರಾಜ ಮಾತ್ರ ತನ್ನ ಹೀರೋ ಕನಸನ್ನು ಈಡೇರಿಸಿಕೊಳ್ಳಲು ಸುಳ್ಳು ಕಥೆ ಕಟ್ಟುತ್ತಾನೆ. ಸಿನಿಮಾ ಅವಕಾಶಕ್ಕಾಗಿ ಬೀದಿ ಬೀದಿ ಅಲೆದಾಡುತ್ತಾನೆ. ಆದರೂ ಅವಕಾಶ ಸಿಗುವುದಿಲ್ಲ. ಈ ಸಮಯದಲ್ಲಿ ಬಣ್ಣ ಬದಲಿಸಿಕೊಂಡು, ಹೀರೋಯಿನ್ ವೇಷ ಧರಿಸುವ ರಾಜ, ರಾಣಿಯಾಗುತ್ತಾನೆ. ಬಳಿಕ ಅದೃಷ್ಟವೇ ಬದಲಾಗಿಬಿಡುತ್ತದೆ. ನಂ.1 ಹೀರೋ ಆಗಬೇಕೆಂದು ಕನಸು ಕಂಡಾತ, ನಂ.1 ಹೀರೋಯಿನ್ ಆಗುತ್ತಾನೆ. ‘ಅವಳು ಅವಳಲ್ಲ, ಅವನು’ ಎಂಬ ಸತ್ಯ ಜನರಿಗೆ ಗೊತ್ತಾಗುತ್ತಾ? ಮುಂದೆ ಅವನಿಗೆ ಹೀರೋ ಆಗುವ ಕನಸು ಏನಾಗುತ್ತದೆ ಎಂಬುದೇ ‘ಮಿಸ್ಟರ್ ರಾಣಿ’ ಚಿತ್ರದ ಕಥೆ.

ನಿರ್ದೇಶಕ ಮಧುಚಂದ್ರ ತಮಾಷೆಯಿಂದಲೇ ಕಥೆ ಆರಂಭಿಸಿ, ತಮಾಷೆಯಿಂದಲೇ ಮುಗಿಸಿದ್ದಾರೆ. ಮನುಷ್ಯನಲ್ಲಿ ಕನಸುಗಳು ಎಷ್ಟು ಜೀವಂತವಾಗಿರುತ್ತದೆ. ಅದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಬೇಕು ಎಂಬ ತಿರುಳು ನೀಡುವ ಪ್ರಯತ್ನ ಮಾಡಿದ್ದಾರೆ. ಮೊದಲಿನಿಂದಲೂ ಕೊನೆಯವರೆಗೆ ಕಥೆಯಲ್ಲಿ ಹಾಸ್ಯವೇ ಪ್ರಧಾನವಾಗಿದ್ದು, ನಗೆಗಡೆಲಲ್ಲಿ ತೇಲಿಸುತ್ತಾರೆ. ನಡು ನಡುವೆ ಒಂದಿಷ್ಟು ಭಾವನಾತ್ಮಕ ದೃಶ್ಯಗಳೂ ಬಂದುಹೋಗುತ್ತವೆ. ಒಂದೇ ವೇಗದಲ್ಲಿ ಕಥೆ ಸಾಗಿದ್ದು, ಎಲ್ಲಿಯೂ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹಾಗಾಗಿ ಬೋರ್ ಎನಿಸದೆ ಸಿನಿಮಾ ನೋಡಿಸಿಕೊಳ್ಳುತ್ತದೆ.

ಇನ್ನು ದೀಪಕ್ ಸುಬ್ರಹ್ಮಣ್ಯ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಾಣಿಯ ಪಾತ್ರದಲ್ಲಿ ಜೀವಿಸಿದ್ದು, ಹಾವ-ಭಾವ, ನಡಿಗೆ, ವಯ್ಯರದಲ್ಲಿ ಥೇಟ್ ನಟಿಯಂತೆ ಕಂಗೊಳಿಸಿದ್ದಾರೆ. ಪಾರ್ವತಿ ನಾಯರ್ ಪಾತ್ರ ಅಷ್ಟೇನೂ ಪ್ರಾಮುಖ್ಯತೆ ವಹಿಸುವುದಿಲ್ಲ. ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಮಧುಚಂದ್ರ ಹಾಗೂ ಸ್ನೇಹಿತನ ಪಾತ್ರಧಾರಿ ಶ್ರೀವತ್ಸ ಶ್ಯಾಮ್ ಪಾತ್ರಗಳು ನಗಿಸುತ್ತವೆ. ಮಕ್ಕಳ ಕನಸನ್ನು ಪಾಲಕರು ಗೌರವಿಸಬೇಕು ಎಂಬ ಸಂದೇಶವನ್ನು ಹಾಸ್ಯದ ಮೂಲಕ ತಿಳಿಸಿರುವ ‘ಮಿಸ್ಟರ್ ರಾಣಿ’ಯನ್ನು ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net