ಬಿಡುಗಡೆ ಮತ್ತೆ ಮುಂದಕ್ಕೆ; ಹಬ್ಬದ ಸಂಭ್ರಮಕ್ಕೆ ಕರೊನಾ ಕಡಿವಾಣ

Salaga
Published on

ವರಮಹಾಲಕ್ಷ್ಮೀ ಹಬ್ಬ ಎಂದರೆ ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಇದೇ ದಿನ ‘ಬಂಧನ’, ‘ಆಪ್ತಮಿತ್ರ’, ‘ಜೋಗಿ’ ಮುಂತಾದ ಹಿಟ್ ಚಿತ್ರಗಳು ಬಿಡುಗಡೆಯಾಗಿವೆ. ಇದೇ ದಿನ ಹಲವು ಚಿತ್ರಗಳು ಮುಹೂರ್ತ ಆಚರಿಸಿಕೊಂಡಿವೆ. ಆದರೆ, ಈ ಬಾರಿ ಚಿತ್ರರಂಗದ ಪಾಲಿಗೆ ಅಷ್ಟೇನೂ ಸಂಭ್ರಮವಿಲ್ಲ. ಏಕೆಂದರೆ, ನಾಡು ಕರೊನಾ ಮೂರನೆಯ ಅಲೆಯ ಭಯದಲ್ಲಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಹಾಜರಾತಿಗೆ ಅನುಮತಿ ನೀಡಲಾಗಿದೆ.

ಇನ್ನು, ಚಿತ್ರಗಳು ಬಿಡುಗಡೆಯಾದರೂ, ಜನರ ಪ್ರತಿಕ್ರಿಯೆ ನೀರಸವಾಗಿದೆ. ಹಾಗಾಗಿ, ಎಲ್ಲೆಡೆ ಹಬ್ಬದ ಸಂಭ್ರಮ ಕಾಣಿಸುತ್ತಿದ್ದರೂ, ಚಿತ್ರರಂಗದ ವಿಷಯದಲ್ಲಿ ಅದು ಕಣ್ಮರೆಯಾಗಿದೆ. ‘ಸಲಗ’, ‘ಲಂಕೆ’ ಮತ್ತು ‘ನಿನ್ನ ಸನಿಹಕೆ’ ಚಿತ್ರಗಳು ಮುಂದಕ್ಕೆ ಹೋಗಿವೆ. ‘ಶಾರ್ದೂಲ’, ‘ಗ್ರೂಫಿ’ ಮತ್ತು ‘ಜೀವ್ನಾನೇ ನಾಟ್ಕ ಸಾಮಿ’ ಎಂಬ ಮೂರು ಹೊಸ ಚಿತ್ರಗಳು ಬಿಡುಗಡೆಯಾಗುತ್ತಿವೆ. ಪ್ರಜ್ವಲ್ ಅಭಿನಯದ ಹೊಸ ಚಿತ್ರ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಅಭಿನಯದ ಇನ್ನೊಂದು ಚಿತ್ರ ಬಿಟ್ಟರೆ, ಮಿಕ್ಕಂತೆ ಒಂದಿಷ್ಟು ಹೊಸಬರ ಚಿತ್ರಗಳು ಇಂದು ಸೆಟ್ಟೇರುತ್ತಿವೆ.

ಇದರ ಜತೆಗೆ, ಶಿವರಾಜಕುಮಾರ್ ಅಭಿನಯದ ‘ಸತ್ಯಮಂಗಳ’ ಚಿತ್ರದ ಪೋಸ್ಟರ್, ‘ಭಜರಂಗಿ 2’ ಚಿತ್ರದ ಲಿರಿಕಲ್ ವಿಡಿಯೋ, ಅಜೇಯ್ ರಾವ್ ಅಭಿನಯದ ‘ಶೋಕಿವಾಲಾ’ ಚಿತ್ರದ ಒಂದು ಹಾಡು, ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರದ ಟ್ರೇಲರ್, ನಿರಂಜನ್ ಅಭಿನಯದ ‘ಸೂಪರ್​ಸ್ಟಾರ್’ ಚಿತ್ರದ ಟೀಸರ್​ಗಳು ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net