7 ಭಾಷೆಗಳಿಗೆ ಡಬ್ ಆಗಿತ್ತು ಮಹಿಷಾಸುರ ಮರ್ದಿನಿ

Raj Uthsava
Published on

ಬೆಂಗಳೂರು: ಡಾ. ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಹಲವು ಚಿತ್ರಗಳು ಇತಿಹಾಸದ ಪುಟಗಳಲ್ಲಿ ತನ್ನದೇ ಕಾರಣಗಳಿಗಾಗಿ ಸ್ಥಾನ ಪಡೆದಿವೆ. ಈ ಪೈಕಿ, 1959ರಲ್ಲಿ ಬಿಡುಗಡೆಯಾದ ‘ಮಹಿಷಾಸುರ ಮರ್ದಿನಿ’ ಚಿತ್ರವು ಭಾರತದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎಂಬ ಹೆಗ್ಗಳಿಕೆ ಇದೆ. ಒಂದು ಚಿತ್ರ ಯಶಸ್ವಿಯಾದರೆ, ಅದು ಬೇರೆ ಭಾಷೆಗಳಿಗೆ ರೀಮೇಕ್ ಅಥವಾ ಡಬ್ ಆಗುವ ಪರಿಪಾಠ ಆಗಲೂ ಇತ್ತು. ಕನ್ನಡದ ಚಿತ್ರಗಳು ಅದಕ್ಕೂ ಮುನ್ನ ಬೇರೆ ಭಾಷೆಗಳಿಗೆ ಡಬ್ ಆದ ಉದಾಹರಣೆಯೂ ಇತ್ತು. ಡಾ. ರಾಜ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ‘ಬೇಡರ ಕಣ್ಣಪ್ಪ’ ಚಿತ್ರವು ‘ಕಾಳಹಸ್ತಿ ಮಹಾತ್ಮ ್ಯ’ ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಇನ್ನು, ‘ಮಹಿಷಾಸುರ ಮರ್ದಿನಿ’ ಚಿತ್ರವು ಏಳು ಭಾಷೆಗಳಿಗೆ ಡಬ್ ಆಗುವ ಮೂಲಕ, ಭಾರತದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎಂಬ ಹೆಗ್ಗಳಿಕೆ ಇದೆ. ತೆಲುಗಿನಲ್ಲೂ ಈ ಚಿತ್ರ ಅದೇ ಹೆಸರಿನಲ್ಲಿ ಬಿಡುಗಡೆಯಾದರೆ, ಹಿಂದಿಯಲ್ಲಿ ‘ದುರ್ಗಾ ಮಾತಾ’ ಎಂಬ ಹೆಸರಿನಲ್ಲಿ ತೆರೆಕಂಡಿತ್ತು.

ವಿಕ್ರಂ ಪ್ರೊಡಕ್ಷನ್ಸ್​ನಡಿ ಬಿ.ಎಸ್. ರಂಗಾ ನಿರ್ವಿುಸಿ-ನಿರ್ದೇಶದ ಈ ಚಿತ್ರದ ಇನ್ನೊಂದು ಹೆಗ್ಗಳಿಕೆ ಎಂದರೆ, ಈ ಚಿತ್ರದ ಮೂಲಕ ರಾಜಕುಮಾರ್ ಮೊದಲ ಬಾರಿಗೆ ಪೂರ್ಣಪ್ರಮಾಣದ ಗಾಯಕರಾದರು. ಅದಕ್ಕೂ ಮುನ್ನ ‘ಓಹಿಲೇಶ್ವರ’ ಚಿತ್ರದಲ್ಲಿ ಒಂದು ಶ್ಲೋಕ ಹಾಡಿದ್ದ ಅವರು, ಈ ಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ನಿರ್ದೇಶನದಲ್ಲಿ ‘ತುಂಬಿತು ಮನವ ತಂದಿತು ಸುಖವ ...’ ಎಂಬ ಹಾಡಿಗೆ ಎಸ್. ಜಾನಕಿ ಜತೆಗೆ ಧ್ವನಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net