ಸ್ನೇಹದ ಮಹತ್ವ ಸಾರುವ ಕಥೆ; ಜೂನ್ 24ಕ್ಕೆ ಬಡ್ಡೀಸ್ ಬಿಡುಗಡೆ

Movie
Published on

ಬೆಂಗಳೂರು: ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ‘ಭರ್ಜರಿ ಗಂಡು’ ನಂತರ ಅದೇ ನಿರ್ದೇಶಕರ ಇನ್ನೊಂದು ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿಯಾಯಿತು. ಅದಲ್ಲದೆ ‘ಬಡ್ಡೀಸ್’ ಎಂಬ ಇನ್ನೊಂದು ಚಿತ್ರದಲ್ಲಿ ಕಿರಣ್ ನಟಿಸುತ್ತಿದ್ದು, ಈ ಚಿತ್ರ ಜೂನ್ 24ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದೆ.

ಈ ಚಿತ್ರವನ್ನು ನಿರ್ದೇಶಿಸಿದವರು ಗುರುತೇಜ್ ಶೆಟ್ಟಿ. ಕಥೆ ಸಿದ್ಧ ಮಾಡಿಕೊಂಡು, ನಿರ್ವಪಕರ ಹುಡುಕಾಟದಲ್ಲಿದ್ದಾಗ, ಸ್ನೇಹಿತರ ಮೂಲಕ ದುಬೈನಲ್ಲಿ ಜಾಹೀರಾತು ಸಂಸ್ಥೆ ನಡೆಸುತ್ತಿರುವ ಭಾರತಿ ಶೆಟ್ಟಿ ಅವರ ಪರಿಚಯವಾಯಿತಂತೆ. ಅವರು ಕಥೆ ಇಷ್ಟಪಟ್ಟು ಚಿತ್ರ ನಿರ್ವಿುಸುವುದಕ್ಕೆ ಮುಂದಾಗಿದ್ದಾರೆ. ‘ಇದು ಸ್ನೇಹದ ಮಹತ್ವ ಸಾರುವ ಚಿತ್ರ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಕಥೆ. ಬಡ್ಡೀಸ್ ಎಂದರೆ ಸ್ನೇಹಿತರು ಎಂದರ್ಥ. ಎಲ್ಲ ಅಪ್ಪಂದಿರು ತಮ್ಮ ಮಕ್ಕಳಿಗೆ ಸಾಮಾನ್ಯವಾಗಿ ಕಾರು, ಬೈಕು ಕೊಡಿಸುತ್ತಾರೆ. ಆದರೆ, ನಮ್ಮ ಚಿತ್ರದಲ್ಲಿ ಶ್ರೀಮಂತ ತಂದೆ, ಮಗನಿಗೆ ಸ್ನೇಹಿತರನ್ನ ಉಡುಗೊರೆಯಾಗಿ ನೀಡುತ್ತಾರೆ. ನಾಯಕ ಹಾಗೂ ಮೂವರು ಸ್ನೇಹಿತರ ನಡುವೆ ನಡೆಯುವ ಕಥೆ ಇದು. ಸ್ನೇಹದ ಜತೆಗೆ ಲವ್ ಮತ್ತು ಸೆಂಟಿಮೆಂಟ್ ಸಹ ಇದೆ’ ಎನ್ನುತ್ತಾರೆ.

ಒಳ್ಳೆಯ ಕಥೆಗಾಗಿ ಹುಡುಕಾಟ ನಡೆಸಿದ್ದ ಕಿರಣ್​ಗೆ ಗುರುತೇಜ್ ಹೇಳಿದ ಕಥೆ ಇಷ್ಟವಾಯಿತಂತೆ. ‘ನಾಯಕನಾಗಿ ಇದು ನನ್ನ ಮೊದಲ ಚಿತ್ರ. ಮನರಂಜನೆಗೆ ಬೇಕಾದ ಎಲ್ಲ ಅಂಶಗಳಿವೆ’ ಎನ್ನುತ್ತಾರೆ. ಕಿರಣ್ ರಾಜ್​ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಮಿಕ್ಕಂತೆ ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net