ಈ ‘ಕೆಜಿಎಫ್​’ ನಟಿ ಹತ್ತಿರ ಇರೋದು ನಾಲ್ಕೇ ಬಟ್ಟೆಯಂತೆ!

Mouni Roy Final
Published on

‘ಕೆಜಿಎಫ್​’ ಹಿಂದಿ ವರ್ಷನ್‌ನಲ್ಲಿ ಯಶ್ ಜತೆಗೆ ಹೆಜ್ಜೆ ಹಾಕಿದ ಮೌನಿ ರಾಯ್ ನೆನಪುಂಟಲ್ಲ? ಅದೇ ‘ಗಲೀ ಗಲೀ ಮೇ ಫಿರ್ತಾ ಹೂಂ ...’ ಹಾಡಿಗೆ ಹೆಜ್ಜೆ ಹಾಕಿದ ನಟಿ. ಈ ಮೌನಿ, ಈಗ ಭಯಂಕರ ಸಂಕಷ್ಟದಲ್ಲಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಅವರು ನಾಲ್ಕೇ ಬಟ್ಟೆ ತೊಡುತ್ತಿದ್ದಾರಂತೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ.

ವಿಷಯ ಏನೆಂದರೆ, ಮಾರ್ಚ್ ತಿಂಗಳಲ್ಲಿ ಮೌನಿ ರಾಯ್, ಅಬುದಾಬಿಗೆ ಯಾವುದೋ ಮ್ಯಾಗಜೀನ್‌ನ ಫೋಟೋ ಶೂಟ್‌ಗೆ ಹೋಗಿದ್ದರಂತೆ. ಹೇಗಿದ್ದರು ಎರಡು ದಿನಗಳ ಕೆಲಸ ಅಂತ ನಾಲ್ಕು ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ. ಫೋಟೋ ಶೂಟ್ ಮುಗಿದ ಮೇಲೆ ಒಂದಿಷ್ಟು ದಿನ ಅಲ್ಲೇ ಕಳೆಯುವುದಕ್ಕೆ ತೀರ್ಮಾನಿಸಿದ್ದಾರೆ. ಶಾಪಿಂಗ್‌ಗೆ ಹೋಗಿ ಒಂದಿಷ್ಟು ಹೊಸ ಬಟ್ಟೆಗಳನ್ನು ಕೊಂಡುಕೊಂಡರಾಯಿತು ಎಂದು ಯೋಚಿಸಿದ್ದಾರೆ.

ಆದರೆ, ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿಬಿಟ್ಟಿದೆ. ವಾಪಸ್ಸು ಭಾರತಕ್ಕೆ ಬರುವಂತಿಲ್ಲ. ಅಲ್ಲೇ ಓಡಾಡುವಂತೆಯೇ ಇಲ್ಲ. ಕೊನೆಗೆ ತಮ್ಮ ಹೋಟೆಲ್ ರೂಮ್‌ನಲ್ಲಿಯೇ ಬಂಧಿಯಾಗಿರುವ ಮೌನಿ ರಾಯ್, ಕಳೆದ ಎರಡು ತಿಂಗಳುಗಳಿಂದ ನಾಲ್ಕೇ ಬಟ್ಟೆಯಲ್ಲಿ ಜೀವಿಸುತ್ತಿದ್ದಾರಂತೆ.

‘ಇಡೀ ಜಗತ್ತೇ ಹೀಗೆ ಲಾಕ್‌ಡೌನ್ ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಈಗ ನೋಡಿದರೆ, ಎರಡು ತಿಂಗಳುಗಳಿಂದ ನಾಲ್ಕು ಬಟ್ಟೆಯಲ್ಲಿ ಇಲ್ಲೇ ಇರುವಂತಾಗಿದೆ. ಇಲ್ಲೇ ಇದ್ದರೂ, ನನ್ನ ಮನಸ್ಸೆಲ್ಲಾ ಭಾರತದಲ್ಲೇ ಇತ್ತು. ನನ್ನ ಫ್ಯಾಮಿಲಿಯ ಬಗ್ಗೆಯೇ ಯೋಚಿಸುವಂತಾಗಿತ್ತು. ಜನರೆಲ್ಲಾ ಕಷ್ಟಪಡುವಾಗ, ನಾನು ಒಂದು ಕಡೆ ಸುರಕ್ಷಿತವಾಗಿದ್ದೀನಿ ಎನ್ನುವ ವಿಷಯ ಬಹಳ ಸಂತೋಷ ಕೊಟ್ಟಿದೆ. ಆದಷ್ಟು ಬೇಗ ಭಾರತಕ್ಕೆ ವಾಪಸ್ಸಾಗುವುದಕ್ಕೆ ಎದುರು ನೋಡುತ್ತಿದ್ದೇನೆ’ ಎಂದು ಮೌನಿ ರಾಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net