ತಾಯಿಯ ಡೆಮೋ ಪೀಸ್​ ಸೋನಲ್​

sonal
Published on

ಸದ್ಯ ಸ್ಟಾರ್ ನಟರ ಸಿನಿಮಾಗಳಿಗೂ ನಾಯಕಿ ಆಗಿ ಬೇಡಿಕೆಯಲ್ಲಿರುವ ಕರಾವಳಿ ಬೆಡಗಿ ಸೋನಲ್ ಮೊಂತೆರೊ ಅಭಿನಯದ ‘ಡೆಮೊ ಪೀಸ್’ ಸಿನಿಮಾ ಶುಕ್ರವಾರ (ಫೆ.14) ತೆರೆ ಕಾಣುತ್ತಿದೆ. ಪ್ರೇಮಿಗಳ ದಿನದಂದೇ ಬಿಡುಗಡೆ ಆಗುತ್ತಿರುವ ತಮ್ಮ ಸಿನಿಮಾದ ಚಿತ್ರ-ಪಾತ್ರ, ತಮ್ಮ ಸಿನಿಪ್ರೀತಿಯ ಕುರಿತು ಸೋನಲ್ ಹಂಚಿಕೊಂಡಿರುವ ಅನಿಸಿಕೆಗಳು ಇಲ್ಲಿವೆ, ಅಕ್ಷರ ರೂಪದಲ್ಲಿ...

‘ಎಕ್ಕ ಸಕ’ ಎನ್ನುತ್ತ ಕೋಸ್ಟಲ್​ವುಡ್​ನಿಂದ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ ‘ರಿಯಲ್​ಸ್ಟಾರ್’ ಉಪೇಂದ್ರ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸದ್ಯ ಪರಭಾಷಾ ಚಿತ್ರರಂಗದಿಂದಲೂ ಬೇಡಿಕೆ ಪಡೆಯುತ್ತಿರುವ ನಟಿ, ಕರಾವಳಿಯ ಬೆಡಗಿ ಸೋನಲ್ ಮೊಂತೆರೊ. ಇವರು ತಮ್ಮ ತಾಯಿಯ ‘ಡೆಮೊ ಪೀಸ್’ ಎಂದರೂ ಅತಿಶಯೋಕ್ತಿ ಅಲ್ಲ. ತಾಯಿ ಏನಾಗಬೇಕು ಅಂದುಕೊಂಡಿದ್ದರೋ ಅದೇ ತಾವಾಗಿ ಅಮ್ಮನ ಕನಸನ್ನೇ ಡೆಮೊನ್​ಸ್ಟ್ರೇಟ್ ಮಾಡುತ್ತಿರುವ ಸೋನಲ್, ಸದ್ಯ ‘ಡೆಮೊ ಪೀಸ್’ ಸಿನಿಮಾ ಮೂಲಕ ರಾಜ್ಯಾದ್ಯಂತ ಪರದೆ ಮೇಲೆ ಮಿಂಚುತ್ತಿದ್ದಾರೆ.

‘ನಾನು ತುಳು ಸಿನಿಮಾ ‘ಎಕ್ಕ ಸಕ’ ಮಾಡುತ್ತಿರುವಾಗ ನನಗೆ ಸಿನಿಮಾ ಇಂಡಸ್ಟ್ರಿ ಒಂಚೂರೂ ಇಷ್ಟ ಇರಲಿಲ್ಲ. ನನಗೆ ಕ್ಲಿನಿಕಲ್ ಸೈಕಲಾಜಿಸ್ಟ್ ಆಗಬೇಕು ಎಂಬ ಆಸೆ ಇತ್ತು. ಆದರೆ ಅಮ್ಮನ ಕನಸು ನನಸಾಗಿಸುವ ಸಲುವಾಗಿ ಚಿತ್ರರಂಗಕ್ಕೆ ಬಂದೆ’ ಎನ್ನುತ್ತ ತಮ್ಮ ಸಿನಿಮಾ ಹಾಗೂ ಸಿನಿಪಯಣದ ಕುರಿತು ಹೇಳಿಕೊಂಡ ಸೋನಲ್, ‘ಇನ್ನು ಸಿನಿಮಾರಂಗ ಬಿಡುವ ಮಾತೇ ಇಲ್ಲ’ ಎನ್ನುತ್ತಾರೆ.

‘ಅಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅವರಿಗೆ ಒಂದು ತಮಿಳು ಸಿನಿಮಾದಲ್ಲಿ ನಟಿ ಆಗುವ ಅವಕಾಶ ಸಿಕ್ಕಿತ್ತು. ಆದರೆ ಚಿತ್ರರಂಗ ಒಳ್ಳೆಯದಲ್ಲ ಎಂದು ಅವರಮ್ಮ ನಟಿಸಲು ಬಿಡದೆ ಮದುವೆ ಮಾಡಿಸಿಬಿಟ್ಟಿದ್ದರು. ಆಗ ಅಮ್ಮ ತನಗೆ ಹುಟ್ಟುವ ಮಗುವನ್ನು ಚಿತ್ರರಂಗಕ್ಕೆ ತಂದೇ ತರುತ್ತೇನೆ ಎಂಬುದನ್ನು ಸವಾಲಾಗಿ ಸ್ವೀಕರಿಸಿದ್ದರು. ಹಾಗಾಗಿ ಇದೇ ಮೊದಲ ಹಾಗೂ ಕೊನೇ ಸಿನಿಮಾ ಎಂದು ಹೇಳಿ ‘ಎಕ್ಕ ಸಕ’ದಲ್ಲಿ ನಟಿಸಿದ್ದೆ. ಬಳಿಕ ‘ಪಿಲಿಬೈಲ್ ಯಮುನಕ್ಕ’ ಸಿನಿಮಾದಲ್ಲಿ ನಟಿಸಿದೆ. ಎರಡೂ ಚಿತ್ರಗಳು ಹಿಟ್ ಆದವು. ಬಳಿಕ ‘ಅಭಿಸಾರಿಕೆ’ ನಂತರ ಯೋಗರಾಜ್ ಭಟ್ ಅವರು ‘ಪಂಚತಂತ್ರ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿದರು. ಅದಾದ ಮೇಲೆ ಉಪೇಂದ್ರ ಅವರ ಅಭಿನಯದ ‘ಬುದ್ಧಿವಂತ 2’, ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ನನ್ನನ್ನು ಚಿತ್ರರಂಗಕ್ಕೆ ಸೇರಿಸಿದ್ದ ಬಗ್ಗೆ ಮೊದಮೊದಲು ಅಮ್ಮನಿಗೆ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅಮ್ಮನಿಗೆ ನನ್ನ ಮೇಲೆ ನಂಬಿಕೆ ಇತ್ತು. ಅದೀಗ ಪ್ರೂವ್ ಆಗಿದ್ದರಿಂದ ಎಲ್ಲರಿಗೂ ಖುಷಿಯೇ. ಈಗ ಏನಾದರೂ ಕಷ್ಟ ಎನಿಸಿದರೆ ಅಮ್ಮನನ್ನು ನೆನಪಿಸಿಕೊಳ್ಳುತ್ತೇನೆ. ಅಮ್ಮನ ಡ್ರೀಮ್ ಈಗ ನನ್ನ ಪ್ಯಾಷನ್ ಆಗಿದೆ. ಏಳು-ಬೀಳು ಕಂಡಿದ್ದೇನೆ. ಆದರೆ ಇನ್ನು ಏನಾದರೂ ಇಲ್ಲೇ.. ಸಿನಿಮಾರಂಗ ಬಿಡುವ ಪ್ರಶ್ನೆಯೇ ಇಲ್ಲ’ ಎನ್ನುತ್ತಾರೆ ಸೋನಲ್.

‘ಡೆಮೊ ಪೀಸ್’ ನಿರ್ವಪಕಿ ‘ಸ್ಪರ್ಶ’ ರೇಖಾ ಹಾಗೂ ನಾನು ಮೊದಲಿನಿಂದಲೂ ಪರಿಚಿತರು, ಫ್ರೆಂಡ್ಸ್ ಕೂಡ. ಅವರು ಈ ಬಗ್ಗೆ ಹೇಳಿದಾಗ ಸ್ಕ್ರಿಪ್ಟ್ ಕೇಳದೆ ಒಪ್ಪಿದೆ. ಕೆಲ ದಿನಗಳ ನಂತರ ಸ್ಕ್ರಿಪ್ಟ್ ಕೇಳಿದೆ. ಅವರ ಮೇಲಿನ ಪ್ರೀತಿ-ವಿಶ್ವಾಸಕ್ಕೆ ಏನನ್ನೂ ಕೇಳದೆ ಒಪ್ಪಿಕೊಂಡೆ’ ಎನ್ನುತ್ತ ‘ಡೆಮೊ ಪೀಸ್’ ಚಿತ್ರ, ಪಾತ್ರದ ಬಗ್ಗೆ ಮಾತಾಡಿದರು ಸೋನಲ್.

‘ಈ ಚಿತ್ರದಲ್ಲಿ ನನ್ನದು ಆದ್ಯಾ ಎಂಬ ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಇಲ್ಲಿ ನಾಯಕಿ ತುಂಬ ಬೋಲ್ಡ್. ಪ್ರೀತಿ-ಗೀತಿ ಎಂಬುದೆಲ್ಲ ಇಷ್ಟವಾಗದಿದ್ದರೂ ಸೆಕೆಂಡ್ ಹಾಫ್​ನಲ್ಲಿ ನಿರ್ದೇಶಕರು ನನ್ನ ಪಾತ್ರಕ್ಕೊಂದು ಟ್ವಿಸ್ಟ್ ಇಟ್ಟಿದ್ದಾರೆ. ಹೀರೋ-ಹೀರೋಯಿನ್ ಎರಡೂ ಪಾತ್ರಗಳನ್ನು ಪ್ರೇಕ್ಷಕರು ತಮಗೆ ರಿಲೇಟ್ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಯಾರು ಎಂಥ ಸ್ನೇಹಿತರೇ ಬರಲಿ, ಕೊನೆಯಲ್ಲಿ ನಮ್ಮ ಜತೆಗಿರುವವರು ತಂದೆ-ತಾಯಿ ಎಂಬುದು ಈ ಚಿತ್ರದ ಸಂದೇಶ’ ಎನ್ನುತ್ತ ಸೋನಲ್ ಟೈಟಲ್ ಬಗ್ಗೆ ವಿವರಣೆ ನೀಡಿದರು. ‘ಸಾಮಾನ್ಯವಾಗಿ ಏನಾದರೂ ಆಗುವ ಮುನ್ನ ಒಂದು ಡೆಮೊ ಅಂತಿರುತ್ತದೆ. ಯಾರೂ ನೇರವಾಗಿ ಮಾಸ್ಟರ್ ಪೀಸ್ ಆಗಲ್ಲ. ಯಶಸ್ಸು ಒಮ್ಮೆಗೇ ಸಿಗುವುದಿಲ್ಲ. ಅದನ್ನು ಗಿಟ್ಟಿಸಿಕೊಳ್ಳುವ ಮೊದಲು ಏನೆಲ್ಲ ಆಗಬೇಕಾಗುತ್ತದೆ ಎಂಬುದೇ ಡೆಮೊ ಪೀಸ್’ ಎನ್ನುವ ಸೋನಲ್, ಸಿನಿಮಾದಲ್ಲಿ ಯಾರು ಡೆಮೊ ಪೀಸ್ ಎಂದು ಕೇಳಿದರೆ ಹೀರೋ ಎನ್ನುತ್ತಾರೆ.

ಹೀರೋ ಭರತ್, ನಿರ್ವಪಕಿ ರೇಖಾ, ನಿರ್ದೇಶಕ ವಿವೇಕ್.. ಮೂವರಿಗೂ ಇದು ಮೊದಲ ಪ್ರಯತ್ನ. ಸೋನಲ್ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಪರಿಣತ ನಟಿ. ಹಾಗಂತ ಅವರಿಗೆ ಹೊಸಬರೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದೆನಿಸಲಿಲ್ಲವಂತೆ. ‘ಹೊಸಬರಿಂದಲೂ ಕಲಿಯುವುದು ಸಾಕಷ್ಟಿರುತ್ತದೆ. ಅಷ್ಟಕ್ಕೂ ನಾನೂ ಹೊಸಬಳಾಗಿಯೇ ಸಿನಿಮಾರಂಗಕ್ಕೆ ಪ್ರವೇಶಿಸಿದ್ದಲ್ವಾ? ಎಂದು ಮರುಪ್ರಶ್ನಿಸುವ ಸೋನಲ್, ‘ರೇಖಾ ನಿರ್ವಪಕಿಯಾಗಿ ಹೊಸಬರಾದರೂ ಅವರಿಗೆ ನಿರ್ವಣದಲ್ಲಿ ಹಿಡಿತವಿದೆ. ಹಾಗಂತ ಯಾವುದಕ್ಕೂ ನಿಯಂತ್ರಣ ಹೇರಲಿಲ್ಲ. ಒಬ್ಬ ಕಲಾವಿದೆಯಾಗಿ ಕಲಾವಿದರಿಗೆ ಏನು ಕೊಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು’ ಎನ್ನುತ್ತಾರೆ. ‘ನಾಯಕ ಭರತ್ ಹೊಸಬರಾದರೂ ಅದ್ಭುತ ಕಲಾವಿದ. ಅವರು ಮಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದರಿಂದ ಇಬ್ಬರಿಗೂ ಮ್ಯೂಚುವಲ್ ಫ್ರೆಂಡ್ಸ್ ಹಲವರಿದ್ದರು. ಹಾಗಾಗಿ ನಾವೂ ಬೇಗ ಫ್ರೆಂಡ್ಸ್ ಆದ ಕಾರಣ ಒಳ್ಳೆಯ ಕೆಮಿಸ್ಟ್ರಿ ಉಂಟಾಯಿತು. ಇನ್ನು ನಿರ್ದೇಶಕರು ಹೊಸಬರಾದರೂ ಅವರ ತಾಳ್ಮೆ ಅಪಾರ. ನಿರ್ದೇಶನದ ಜತೆಗೆ ಅವರು ನಿರ್ವಣದಲ್ಲೂ ಕೈಜೋಡಿಸಿದ್ದಾರೆ. ಒಟ್ಟಾರೆ ಇದೊಂದು ಯಂಗ್ ಟೀಮ್ ಶೂಟಿಂಗ್ ತುಂಬ ಎಂಜಾಯ್ ಮಾಡಿದೆ’ ಎನ್ನುತ್ತಾರೆ ಮೊಂತೆರೊ. ಅಂದಹಾಗೆ ವೃತ್ತಿ ಜೀವನದ ಈ 5 ವರ್ಷಗಳಲ್ಲಿ ಅಪಾರ ಸಹನೆ ಕಲಿತೆ. ಪ್ರತಿ ಚಿತ್ರದಿಂದಲೂ ಕಲಿಯುತ್ತಲೇ ಇದ್ದೇನೆ’ ಎನ್ನುತ್ತಾರೆ ಸೋನಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net