ಮದರ್ ಇಂಡಿಯಾ ಸುಮಲತಾ

sumalatha jan 15 2020
Published on

ಬೆಂಗಳೂರು: ಇಂಡಿಯಾ ಎಂಬ ಪದದ ಜತೆಗೆ ಮದರ್ ಸೇರಿಕೊಂಡರೆ ಅಲ್ಲೊಂದು ಭಾವುಕತೆ ಮೂಡುತ್ತದೆ. ಅಂಥದ್ದೇ ಒಂದು ಮದರ್ ಸೆಂಟಿಮೆಂಟ್ ಈಗ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾದಲ್ಲೂ ಕೇಳಿಬಂದಿದೆ. ಹಾಗಂತ ಚಿತ್ರದ ಟೈಟಲ್ ಅಥವಾ ಕಥೆಯಲ್ಲಿ ಏನೂ ಬದಲಾಗಿಲ್ಲ. ಆದರೆ ಟ್ರೇಲರ್ ಬಿಡುಗಡೆಗೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟೈಟಲ್​ಗೆ ಮದರ್ ಸೆಂಟಿಮೆಂಟ್ ಟಚ್ ಕೊಟ್ಟಿದ್ದಾರೆ. ಅಂದಹಾಗೆ ಅದಕ್ಕೆ ಕಾರಣ ಬೇರಾರೂ ಅಲ್ಲ, ಸಂಸದೆ-ನಟಿ ಸುಮಲತಾ.

ಹೌದು.. ‘ಇಂಡಿಯಾ ವರ್ಸಸ್ ಇಂಗ್ಲೆಂಡ್‘ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್, ಚಿತ್ರದ ಟೈಟಲ್ ಬಗ್ಗೆ ಮಾತನಾಡುತ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಮಲತಾ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಇಲ್ಲಿ ಇಂಡಿಯಾ ಮಾತ್ರ ಅಲ್ಲ ಮದರ್ ಇಂಡಿಯಾ ಕೂಡ ಇದ್ದಾರೆ’ ಎಂದರು. ಮಾತ್ರವಲ್ಲ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ, ಈಗಲೂ ಇಷ್ಟು ಗ್ಲಾಮರಸ್ ಆಗಿ ಬಂದರೆ ಹೇಗೆ ಎಂದು ನಗೆಯುಕ್ಕಿಸಿದರು. ಅಂದಹಾಗೆ ಈ ಸಿನಿಮಾದಲ್ಲಿ ಸುಮಲತಾ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಕಥಾನಾಯಕನ ತಾಯಿ ಆಗಿ ಅವರು ಅಭಿನಯಿಸಿದ್ದಾರೆ. ಬಳಿಕ ಮಾತನಾಡಿದ ಸುಮಲತಾ, ದರ್ಶನ್​ರನ್ನು ಮಗ ಎಂದೇ ಕರೆದರು. ‘ದರ್ಶನ್ ಜತೆಗಿದ್ದರೆ ಈ ಅಮ್ಮನಿಗೆ ಗೆಲುವೇ..’ ಎನ್ನುತ್ತ ಸಿನಿಮಾ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ‘ಕೊನೇ ಉಸಿರು ಇರುವವರೆಗೆ ಚಿತ್ರರಂಗದಲ್ಲಿ ಇರಬೇಕು ಎಂಬುದಕ್ಕೆ ನನಗೆ ಸುಮಲತಾ ಅವರೇ ಸ್ಪೂರ್ತಿ’ ಎಂದರು ನಾಯಕಿ ಮಾನ್ವಿತಾ. ‘ನಾಟಕದ ಗೀಳು ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂತು. ದರ್ಶನ್ ಅವರಂತೆಯೇ ನಾನು ಬದುಕಬೇಕು. ಅವರ ಬದುಕು ನನ್ನ ಕನಸು ಕೂಡ..’ ಎಂದರು ನಾಯಕ ವಸಿಷ್ಠ ಸಿಂಹ.

‘ದರ್ಶನ್​ಗೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವ ಶಕ್ತಿ ಇದೆ. ಹೀಗಾಗಿ ಅವರು ಹಿರಿಯ ಕಲಾವಿದ’ ಎನ್ನುತ್ತ ತೂಗುದೀಪ ಶ್ರೀನಿವಾಸ್ ಜತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ‘ಈ ಚಿತ್ರಕ್ಕೆ ನಿರ್ವಪಕ ಶಂಕರೇಗೌಡ ಸೇರಿ ದೇಶ-ವಿದೇಶದ ಹಲವರು ಬಂಡವಾಳ ಹೂಡಿದ್ದಾರೆ. ಇದೊಂಥರಾ ಫ್ಯಾಮಿಲಿ ಫಂಡೆಡ್ ಸಿನಿಮಾ’ ಎಂದರು.

ಈ ಚಿತ್ರದ ಬ್ರ್ಯಾಂಡಿಂಗ್​​ನಲ್ಲಿ ಕೈಜೋಡಿಸಿರುವ ‘ಅಮೃತ್ ನೋನಿ’ ಉತ್ಪನ್ನಗಳ ತಯಾರಿಕಾ ಸಂಸ್ಥೆ ‘ವ್ಯಾಲ್ಯೂ ಪ್ರಾಡಕ್ಟ್ ನ ಎಂಡಿ ಶ್ರೀನಿವಾಸ ಮೂರ್ತಿ ಅವರು ಅಮೃತ ನೋನಿ ಉತ್ಪನ್ನಗಳ ಬಗ್ಗೆ ಮಾತನಾಡುತ್ತ ಚಿತ್ರಕ್ಕೆ ಶುಭ ಹಾರೈಸಿದರು. ‘ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್’ ಮೂಲಕ ಮೂಡಿಬಂದಿರುವ ಈ ಸಿನಿಮಾ ಜ.24ರಂದು ತೆರೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net