ಮಾನ್ಸೂನ್​ನಲ್ಲೊಂದು ಪ್ರೇಮರಾಗ...; ವಿಜಯವಾಣಿ ಸಿನಿಮಾ ವಿಮರ್ಶೆ

Monsoon Raaga
Published on
  • ಚಿತ್ರ: ಮಾನ್ಸೂನ್ ರಾಗ
  • ನಿರ್ದೇಶನ: ರವೀಂದ್ರನಾಥ್
  • ನಿರ್ಮಾಪಕ: ವಿಖ್ಯಾತ್
  • ತಾರಾಗಣ: ಧನಂಜಯ್, ರಚಿತಾ ರಾಮ್ ಅಚ್ಯುತ್ ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್, ಶೋಭರಾಜ್ ಮುಂತಾದವರು

| ಚೇತನ್ ನಾಡಿಗೇರ್

‘ಮಾನ್ಸೂನ್ ರಾಗ’ ಚಿತ್ರ ಪ್ರಾರಂಭವಾಗುವುದು ಮದುವೆಯಾಗದ ಮಧ್ಯವಯಸ್ಕನೊಬ್ಬ ಹಾಸಿಗೆಯಿಂದೇಳುವ ಮೂಲಕ. ಮುಕ್ತಾಯವಾಗುವುದು ಅವನು ಮಲಗುವ ಮೂಲಕ. ಏಳುವಾಗ ಒಬ್ಬನೇ. ಮಲಗುವಾಗ ಜತೆಗೆ ಹೆಂಡತಿ. ಈ ಮಧ್ಯೆ ಆತನ ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದೇ ಚಿತ್ರದ ಕಥೆ. ಅಲ್ಲಲ್ಲಿ ಬೇರೆ ಮೂರು ಕಥೆಗಳೂ ಬರುತ್ತಿರುತ್ತವೆ. ಈ ನಾಲ್ಕೂ ಕಥೆಗಳಿಗೂ ಒಂದು ಸಾಮಾನ್ಯ ಲಿಂಕ್ ಇದೆ. ಅದು ಈ ನಾಲ್ಕು ವಿಭಿನ್ನ ಪ್ರೇಮಕಥೆಗಳನ್ನು ಬೆಸೆಯುತ್ತದೆ. ನಿಜ ಹೇಳಬೇಕೆಂದರೆ, ಚಿತ್ರದ ಹೈಲೈಟ್ ಮತ್ತು ರಹಸ್ಯವೇ ಅದು. ಅದೇನೆಂದು ಗೊತ್ತಾಗಬೇಕಿದ್ದರೆ, ಚಿತ್ರ ನೋಡಲೇಬೇಕು.

‘ಮಾನ್ಸೂನ್ ರಾಗ’ ತೆಲುಗಿನ ‘ಕೇರ್ ಆಫ್ ಕಾಂಚರಪಲೇಮ್ ಎಂಬ ಚಿತ್ರದ ರಿಮೇಕ್. 2018ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿತ್ತು. ಕಡಿಮೆ ಬಜೆಟ್​ನಲ್ಲಿ, ಬಹುತೇಕ ಹೊಸಬರೇ ತುಂಬಿದ್ದ ಮತ್ತು ಹಸಿಹಸಿಯಾಗಿ ಮೂಡಿಬಂದಿದ್ದ ಈ ಚಿತ್ರವನ್ನು ಇದೀಗ ಬೇರೆ ತರಹ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ರವೀಂದ್ರನಾಥ್.

ಮೂಲ ಚಿತ್ರ ಜನಮನ್ನಣೆ ಪಡೆದಿದ್ದೇ ಈ ಕಾರಣಗಳಿಂದ ಎಂದರೆ ತಪ್ಪಿಲ್ಲ. ಆದರೆ, ಅದು ರಿಮೇಕ್ ಆಗಿ ಇಲ್ಲಿಗೆ ಬರುವಾಗ ಸಾಕಷ್ಟು ಬದಲಾವಣೆಗಳಾಗಿವೆ. ಹೊಸಬರ ಬದಲು ಹಳಬರು ಬಂದಿದ್ದಾರೆ. ಪ್ರತಿ ದೃಶ್ಯವನ್ನು ಸ್ಟೈಲಿಶ್ ಆಗಿ ಸೆರೆಹಿಡಿಯಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರ ಕ್ಲಾಸ್ ಆಗಿ ಮೂಡಿಬಂದಿದೆ. ಹೀಗೆ ಸಾಕಷ್ಟು ಬದಲಾವಣೆಗಳ ನಡುವೆಯೂ ಚಿತ್ರದ ಆತ್ಮ ಹಿಡಿದಿಡುವಲ್ಲಿ ಚಿತ್ರತಂಡ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ನಾಲ್ಕು ಕಥೆಗಳ ಮೂಲಕ ಪ್ರೀತಿಯ ವಿವಿಧ ಮಜಲುಗಳನ್ನು ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಿರುವುದು ವಿಶೇಷ. ಇಲ್ಲಿ ಜಾತಿ-ಧರ್ಮದ ಸಮಸ್ಯೆ ಇದೆ. ಅಂತಸ್ತಿನ ಸವಾಲಿದೆ. ವಯಸ್ಸಿನ ಅಂತರವಿದೆ. ಇದೆಲ್ಲವನ್ನೂ ಮೀರುವ ಸಹೃದತೆಯೂ ಇದೆ. ಚಿತ್ರದ ಪೋಸ್ಟರ್ ನೋಡಿ, ಇಡೀ ಚಿತ್ರವನ್ನು ಧನಂಜಯ್ ಮತ್ತು ರಚಿತಾ ರಾಮ್ ಅವರಿಬ್ಬರೇ ಆವರಿಸಿಕೊಂಡಿರುತ್ತಾರೆ ಅಂದುಕೊಂಡರೆ ನಿರೀಕ್ಷೆ ಹುಸಿಯಾಗುತ್ತದೆ. ಈ ಚಿತ್ರದಲ್ಲಿ ಅವರಿಬ್ಬರೂ ಒಂದು ಭಾಗವಷ್ಟೇ ಹೊರತು, ಅವರ ಕಥೆಯೇ ಇಡೀ ಚಿತ್ರದ ಕಥೆಯಲ್ಲ. ಮೊದಲೇ ಹೇಳಿದಂತೆ, ಚಿತ್ರದಲ್ಲಿ ಬೇರೆಯ ಕಥೆಗಳೂ ಇವೆ ಮತ್ತು ಇನ್ನಷ್ಟು ಪಾತ್ರಗಳಿವೆ. ಅವರೆಲ್ಲರ ಸುತ್ತ ಕಥೆ ಸುತ್ತುತ್ತಲೇ ಇರುತ್ತದೆ. ಈ ಪೈಕಿ ಹೆಚ್ಚು ಇಷ್ಟವಾಗುವುದು ಅಚ್ಯುತ್ ಕುಮಾರ್ ಮತ್ತು ಸುಹಾಸಿನಿ ಅವರ ಕಥೆ. ಅವರಿಬ್ಬರ ಲವಲವಿಕೆ, ಅಭಿನಯವೇ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ. ಅವರಿಬ್ಬರೂ ತೆರೆಯ ಮೇಲಿದ್ದಾಗ, ಚಿತ್ರಕ್ಕೆ ಇನ್ನಷ್ಟು ವೇಗ ಇರುತ್ತದೆ. ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಅದೇ ವಿಷಯವನ್ನು ಬೇರೆ ಕಥೆಗಳ ಬಗ್ಗೆ ಹೇಳುವುದು ಕಷ್ಟ.

ಧನಂಜಯ್, ರಚಿತಾ ರಾಮ್ ಶೋಭರಾಜ್, ಯಶಾ ಶಿವಕುಮಾರ್, ಶಿವಾಂಕ್ ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮೌನಕ್ಕೆ ಜಾಗವೇ ಕೊಡದಂತೆ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಮೂಲಕ ಅನೂಪ್ ಸೀಳಿನ್ ಆವರಿಸಿಕೊಳ್ಳುತ್ತಾರೆ. ಎಸ್.ಕೆ. ರಾವ್ ಇಡೀ ಚಿತ್ರವನ್ನು ತಮ್ಮ ಛಾಯಾಗ್ರಹಣದಿಂದ ಅಂದಗೊಳಿಸಿದ್ದಾರೆ. ಗುರುಕಶ್ಯಪ್ ಅವರ ಮಾತುಗಳು ಅಲ್ಲಲ್ಲಿ ಮನಸ್ಸಿಗೆ ನಾಟುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net