ಶ್ರೀ ವರದರಾಜಸ್ವಾಮಿಗೆ ಪೊಲೀಸರಿಂದ ಗೌರವ ವಂದನೆ

ವಿಜಯ ದಶಮಿಯ ಪ್ರಯುಕ್ತ ಪೂಜಾ ಕೈಂಕರ್ಯ
ಎಚ್.ಡಿ.ಕೋಟೆ ಪಟ್ಟಣದ ವರದರಾಜ ದೇವಾಲಯದ ಆವರಣದಿಂದ ವಿಜಯ ದಶಮಿಯ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಿತು.
ಎಚ್.ಡಿ.ಕೋಟೆ ಪಟ್ಟಣದ ವರದರಾಜ ದೇವಾಲಯದ ಆವರಣದಿಂದ ವಿಜಯ ದಶಮಿಯ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಿತು.
Published on: 

ಎಚ್.ಡಿ.ಕೋಟೆ: ಪಟ್ಟಣದ ವರದರಾಜ ದೇವಾಲಯದ ಆವರಣದಲ್ಲಿ ಬುಧವಾರ ವಿಜಯ ದಶಮಿಯ ಪ್ರಯುಕ್ತ ಶ್ರೀ ವರದರಾಜಸ್ವಾಮಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ನವರಾತ್ರಿ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ಪಟ್ಟಣದಲ್ಲಿ ದಸರಾ ಮಾದರಿಯಲ್ಲೇ ಅನೇಕ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜಯದಶಮಿ ಅಂಗವಾಗಿ ಬುಧವಾರ ವಿಶೇಷ ಪೂಜಾ ಕೈಂಕರ್ಯ, ಹೋಮ-ಹವನ ನೆರವೇರಿದವು. ಮುಂದಿನ ನಾಲ್ಕು ದಿನಗಳ ಕಾಲವೂ ಸಹ ವಿವಿಧ ಪೂಜಾ ಕೈಂಕರ್ಯ ಜರುಗಲಿವೆ ಎಂದು ದೇವಾಲಯ ದಸರಾ ಆಚರಣಾ ಸಮಿತಿ ಅಧ್ಯಕ್ಷ ಡೈರಿ ಶ್ರೀಕಾಂತ್ ಮಾಹಿತಿ ನೀಡಿದರು.

ವರದರಾಜಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ತಿರುಮಲಾಚಾರ್ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಅನಾದಿ ಕಾಲದಿಂದಲೂ ದಸರಾ ನಡೆಯುತ್ತಿದೆ. ಚಾಮುಂಡೇಶ್ವರಿಗೆ ಪೊಲೀಸ್ ವಂದನೆ ಮಾಡುತ್ತಾ ಬರಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಬಿಟ್ಟರೆ ಎಚ್.ಡಿ. ಕೋಟೆ ಪಟ್ಟಣದ ವರದರಾಜಸ್ವಾಮಿಗೆ ಪೊಲೀಸ್ ವಂದನೆ ನಡೆಯುತ್ತದೆ. ಅದರಂತೆ ಗುರುವಾರ ವರದರಾಜಸ್ವಾಮಿಗೆ ಪೊಲೀಸ್ ವಂದನೆ ಸಲ್ಲಿಸಲಾಗುತ್ತಿದೆ. ಇದನ್ನು ಪೊಲೀಸ್ ಪೂಜೆ ಎಂದೇ ನಡೆಸಲಾಗುತ್ತಿದೆ ಎಂದರು.

ಎಚ್.ಡಿ. ಕೋಟೆ ದಸರಾ ಆರಂಭವಾದಂದಿನಿಂದ ಇಲ್ಲಿಯವರೆಗೂ ಪೊಲೀಸ್ ಪೂಜೆ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ ಎಂದರು.

ವರದರಾಜಸ್ವಾಮಿ ದೇವಾಲಯದಲ್ಲಿ ವಿಗ್ರಹ ಕಳುವಾಗಿದ್ದಾಗ ವಿಗ್ರಹ ಸಿಗುವವರೆಗೆ ಅಂದರೆ ಐದು ವರ್ಷಗಳ ಕಾಲ ದಸರಾ ನಡೆದಿರಲಿಲ್ಲ, ಆಗ ಹೊರತುಪಡಿಸಿ ಉಳಿದೆಲ್ಲ ದಸರಾಗಳಲ್ಲಿ ಪೊಲೀಸ್ ಪೂಜೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ ಎಂದರು.

ಪೊಲೀಸ್ ಪೂಜೆ ನಂತರ ಸಬ್‌ಇನ್‌ಸ್ಪ್ಪೆಕ್ಟರ್ ಸುರೇಶ್ ನಾಯಕ ಮಾತನಾಡಿ, ರಾಜ್ಯದಲ್ಲಿ ದಸರಾ ವೇಳೆ ಮೈಸೂರಿನಲ್ಲಿ ಚಾಮುಂಡೇಶ್ವರಿ ಬಳಿಕ ಇಲ್ಲಿ ವರಸರಾಜಸ್ವಾಮಿಗೆ ಪೊಲೀಸ್ ವಂದನೆ ಸಲ್ಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ನಮ್ಮ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ, ನಮ್ಮ ಸಿಬ್ಬಂದಿ ಈ ಪೂಜಾ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗವಹಿಸಿ ಕೋಟೆ ದಸರಾ ಯಶಸ್ವಿಗೊಳಿಸಿದ್ದಾರೆ ಎಂದರು.

ಎಸ್‌ಐ ಶಿವಕುಮಾರ್, ಸಿಬ್ಬಂದಿ ಸೈಯದ್ ಕಬೀರುದ್ದಿನ್, ಯೋಗೇಶ್, ಮಹೇಶ್, ಉಮೇಶ್, ಆನಂದ್, ಶ್ರೀನಿವಾಸ್, ಅವಿನಾಶ್, ನಿತಿನ್, ಮಹಾದೇವಮ್ಮ, ಸವಿತಾ ಪೊಲೀಸ್ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚಾಕಳ್ಳಿ ಕೃಷ್ಷ, ಎಂ.ಸಿ. ದೊಡ್ಡ ನಾಯಕ, ಚಾನಂಜುಂಡಮೂರ್ತಿ, ನಾಗರಾಜು, ಪ್ರಸಾದ್, ಶ್ರೀಕಾಂತ್, ಜಯಂತ್, ದೇವರಾಜು, ಸ್ವಾಮಿನಾಯಕ, ದೇವನಾಯಕ, ಚಿಕ್ಕನಾಯಕ, ಕೆಂಡಗಣ್ಣಸ್ವಾಮಿ, ರಾಜೇಂದ್ರ, ವೆಂಕಟೇಶ್, ನಾಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net