2025ರ ಅತಿದೊಡ್ಡ ಫ್ಲಾಪ್​ ಸಿನಿಮಾ: ಸ್ಟಾರ್ ನಟ,​ ಬಜೆಟ್​ 70 ಕೋಟಿ, 6 ದಿನಕ್ಕೆ ಗಳಿಸಿದ್ದು ಮಾತ್ರ 2 ಕೋಟಿ! Biggest flop

2025ರ ಅತಿದೊಡ್ಡ ಫ್ಲಾಪ್​ ಸಿನಿಮಾ
2025ರ ಅತಿದೊಡ್ಡ ಫ್ಲಾಪ್​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ರಂಗ ಅಂದಮೇಲೆ ಹಿಟ್​ ಹಾಗೂ ಫ್ಲಾಪ್​ ಸಿನಿಮಾಗಳು ಸಾಮಾನ್ಯ
  • ಸಣ್ಣ ಬಜೆಟ್​ನಲ್ಲಿ ನಿರ್ಮಿಸಿದ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತವೆ
  • ಅದೇ ರೀತಿ ಭಾರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳು ಮಕಾಡೆ ಮಲಗುತ್ತವೆ
  • ನಾವೀಗ 2025ನೇ ವರ್ಷದ ಅತಿದೊಡ್ಡ ಫ್ಲಾಪ್​ ಸಿನಿಮಾದ ಬಗ್ಗೆ ತಿಳಿದುಕೊಳ್ಳೋಣ
ನವದೆಹಲಿ: ಸಿನಿಮಾ ರಂಗ ಅಂದಮೇಲೆ ಹಿಟ್​ ಹಾಗೂ ಫ್ಲಾಪ್​ ಸಿನಿಮಾಗಳು ( Biggest flop ) ಸಾಮಾನ್ಯ. ಸಣ್ಣ ಬಜೆಟ್​ನಲ್ಲಿ ನಿರ್ಮಿಸಿದ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತವೆ. ಅದೇ ರೀತಿ ಭಾರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ ಸಿನಿಮಾಗಳು ಮಕಾಡೆ ಮಲಗುತ್ತವೆ. ಇದೆಲ್ಲ ಪ್ರೇಕ್ಷಕರ ಅಭಿರುಚಿಯ ಮೇಲೆ ಅವಲಂಬಿತವಾಗಿರುತ್ತದೆ. ದೊಡ್ಡ ಸ್ಟಾರ್​ ನಟರನ್ನು ಹಾಕಿಕೊಂಡು, ಹಣವನ್ನು ನೀರಿನಂತೆ ಖರ್ಚು ಮಾಡಿ ನಿರ್ಮಿಸಿದಂತಹ ಸಿನಿಮಾ ಒಂದು ವಾರ ಕೂಡ ಚಿತ್ರಮಂದಿರಗಳಲ್ಲಿ ಉಳಿಯದೇ ಹೋದರೆ, ಅದು ಇಡೀ ಚಿತ್ರತಂಡಕ್ಕೆ ಆಗುವ ದೊಡ್ಡ ಅವಮಾನ ಎಂದರೆ ತಪ್ಪಾಗಲಾರದು.
ನಾವೀಗ 2025ನೇ ವರ್ಷದ ಅತಿದೊಡ್ಡ ಫ್ಲಾಪ್​ ಸಿನಿಮಾದ ಬಗ್ಗೆ ತಿಳಿದುಕೊಳ್ಳೋಣ. ಈ ಸಿನಿಮಾ, ಭಾರತದ ಅತಿದೊಡ್ಡ ಫ್ಲಾಪ್​ ಸಿನಿಮಾವೆಂಬ ಅಪಖ್ಯಾತಿಗೆ ಗುರಿಯಾಗಿದೆ. ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಚಂಡಮಾರುತ ಸೃಷ್ಟಿಸಿ, ಸ್ಟಾರ್​ ನಟನಿಗೆ ಹ್ಯಾಟ್ರಿಕ್​ ಸಿನಿಮಾ ಆಗುತ್ತದೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ, ಈ ಸಿನಿಮಾ ಎಷ್ಟರಮಟ್ಟಿಗೆ ಸೋಲುಂಡಿದೆ ಅಂದರೆ, ಬಿಡುಗಡೆಯಾದ ಕೇವಲ 6 ದಿನದಲ್ಲಿ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕಣ್ಮರೆಯಾಗಿದೆ.
ಅಂದಹಾಗೆ, ಈವರೆಗೂ ನಾವು ಮಾತನಾಡಿದ್ದು ಮಲಯಾಳಂ ಸೂಪರ್​ಸ್ಟಾರ್​ ಮೋಹನ್​ಲಾಲ್​ ನಟನೆಯ ವೃಷಭ ಚಿತ್ರದ ಬಗ್ಗೆ. ಈ ಸಿನಿಮಾ 2025ನೇ ಸಾಲಿನ ಅತಿದೊಡ್ಡ ಫ್ಲಾಪ್​ ಸಿನಿಮಾ ಎಂಬ ಅಪಖ್ಯಾತಿ ಗಳಿಸಿದೆ. ಗಮನಾರ್ಹ ಸಂಗತಿ ಏನೆಂದರೆ, 2025ನೇ ವರ್ಷ ಮೋಹನ್​ಲಾಲ್​ ಅವರ ಪಾಲಿಗೆ ಚಿನ್ನದ ವರ್ಷ ಎನ್ನಬಹುದು. ಏಕೆಂದರೆ, ಅವರ ನಟನೆಯ ಥುಡರಂ ಮತ್ತು ಎಲ್​2 ಎಂಪುರಾನ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದವು. ವೃಷಭ ಸಿನಿಮಾ ಮೂಲಕ ಹ್ಯಾಟ್ರಿಕ್​ ಕನಸು ಕಂಡಿದ್ದರು. ಆದರೆ, ಈ ಸಿನಿಮಾವನ್ನು ಸಿನಿ ಪ್ರೇಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದರ ಪರಿಣಾಮ ನಿರ್ಮಾಪಕರಿಗೆ ಶೇ. 97 ರಷ್ಟು ನಷ್ಟವಾಗಿದೆ.

ಬಜೆಟ್​ ಎಷ್ಟು?

ಮಲಯಾಳಂನ ಎಪಿಕ್​ ಡ್ರಾಮಾ ವೃಷಭ, 2025, ಡಿಸೆಂಬರ್​ 25ರಂದು ಬಿಡುಗಡೆಯಾಯಿತು. ಈ ಸಿನಿಮಾ ಮೊದಲ ದಿನವೇ 60 ಲಕ್ಷ ರೂ. ಸಂಗ್ರಹ ಮಾಡಿತು. ಸಿನಿಮಾ ಬಗ್ಗೆ ಎಲ್ಲೆಡೆ ನೆಗೆಟಿವ್​ ಅಭಿಪ್ರಾಯಗಳು ಬಂದಿದ್ದರಿಂದ ಎರಡನೇ ದಿನಕ್ಕೆ ಬಾಕ್ಸ್​ಆಫೀಸ್​ ಸಂಗ್ರಹ ಸೇತುವೆ ಕುಸಿದಂತೆ ಕುಸಿಯಿತು. ಅಂದಿನಿಂದ ಈ ಸಿನಿಮಾ ಮೇಲೇರಲೇ ಇಲ್ಲ. 6ನೇ ದಿನದ ಹೊತ್ತಿಗೆ ಈ ಚಿತ್ರವು ಭಾರತದಲ್ಲಿ ಕೇವಲ 1.5 ಕೋಟಿ ರೂ. ಮಾತ್ರ ಗಳಿಸಿದೆ. ಇನ್ನು ವಿದೇಶಗಳಲ್ಲಿ ಕೇವಲ 30 ಸಾವಿರ ಡಾಲರ್ ಮಾತ್ರ ಗಳಿಸಿದೆ. ಬರೋಬ್ಬರಿ 70 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ಕೇವಲ 2 ಕೋಟಿ ರೂ. ಗಳಿಸಲು ಸಾಧ್ಯವಾಗಿದ್ದು, ಬಜೆಟ್‌ನ ಶೇ. 97% ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.
ಅಂದಹಾಗೆ, ಮೋಹನ್ ಲಾಲ್​ರಂಥ ಸ್ಟಾರ್​ ನಟರಿದ್ದರೂ ಈ ಸಿನಿಮಾ ವಿಫಲವಾಗಿದೆ. ಆರಂಭದಲ್ಲಿ ಕುಸಿದ ಈ ಸಿನಿಮಾ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಹೀಗಾಗಿ, ಕೇರಳದ ಅನೇಕ ಚಿತ್ರಮಂದಿರಗಳು ತಮ್ಮ ನಷ್ಟವನ್ನು ತಡೆಯಲು ಮಂಗಳವಾರವೇ ಈ ಚಿತ್ರವನ್ನು ಸ್ಥಗಿತಗೊಳಿಸಿದವು. ದುಃಖಕರ ಸಂಗತಿ ಏನೆಂದರೆ, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಂದು ವಾರವನ್ನು ಸಹ ಪೂರ್ಣಗೊಳಿಸಲಿಲ್ಲ. ಇದೇ ಟ್ರೆಂಡ್​ ಮುಂದುವರಿದರೆ ವೃಷಭ ಸಿನಿಮಾ ತನ್ನ ಲೈಫ್​ಟೈಮ್​ ಕಲೆಕ್ಷನ್​ ಅನ್ನು 5 ರಿಂದ 7 ಕೋಟಿ ಒಳಗೆ ಮುಗಿಸಲಿದೆ. ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಕನ್ನಡದ ಸ್ಟಾರ್​ ಡೈರೆಕ್ಟರ್​ ನಂದಕಿಶೋರ್​, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net