ಅಂದಹಾಗೆ, ಮಲಯಾಳಂ ಮೂಲದ ನಟಿ ಭಾವನಾ ಮೆನನ್, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. 2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ' ಚಿತ್ರದ ಮೂಲಕ ಅದ್ಧೂರಿಯಾಗಿ ಕನ್ನಡಕ್ಕೆ ಪದಾರ್ಪಣೆ ಮಾಡಿದರು ಮತ್ತು ಮೊದಲ ಸಿನಿಮಾದಲ್ಲೇ ತಮ್ಮ ಸಹಜ ನಟನೆ ಮತ್ತು ಮುದ್ದಾದ ಅಭಿನಯದಿಂದ ಕನ್ನಡಿಗರ ಮನಗೆದ್ದರು. ನಂತರ ಸುದೀಪ್ ಅವರೊಂದಿಗೆ 'ವಿಷ್ಣುವರ್ಧನ್', ಉಪೇಂದ್ರ ಜೊತೆ 'ಟೋಪಿವಾಲ' ಮತ್ತು ಶಿವಣ್ಣನವರ ಜೊತೆ 'ಟಗರು' ಹಾಗೂ 'ಭಜರಂಗಿ-2' ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಭಾವನಾ ಅವರು, ಕನ್ನಡ ಭಾಷೆಯನ್ನು ಕಲಿತು ಸ್ವತಃ ತಾವೇ ಡಬ್ಬಿಂಗ್ ಮಾಡುವ ಮೂಲಕ ಕನ್ನಡಿಗರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ, (ಏಜೆನ್ಸೀಸ್).