ಬೆಂಗಳೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಕಮರ್ಷಿಯಲ್ ಅನಿಲ ಇಂಧನ ಸರಬರಾಜು ಕುಂಠಿತವಾಗಿದೆ. ಇದರಿಂದಾಗಿ ದೇಶಾದ್ಯಂತ ‘ಗ್ಯಾಸ್’ ಟ್ರಬಲ್ ಉಂಟಾಗಿದ್ದು, ಜನಸಾಮಾನ್ಯರು ಪರಿತಪಿಸುವಂತಾಗಿದೆ. ಹೋಟೆಲ್, ರೆಸ್ಟೋರೆಂಟ್ ನಷ್ಟದ ಸುಳಿಗೆ ಸಿಲುಕಿದ್ದು, ತಾತ್ಕಾಲಿಕವಾಗಿ ಮುಚ್ಚುವ ಹಂತಕ್ಕೆ ಬಂದಿವೆ. ಇದೀಗ ‘ಗ್ಯಾಸ್’ ಕೊರತೆಯು ಚಿತ್ರರಂಗದ ಮೇಲೂ ಪರಿಣಾಮ ಬೀರಿದ್ದು, ಇದರಿಂದಾಗಿ ಸುಮಾರು 18 ಮಲಯಾಳಂ ಚಿತ್ರಗಳ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕೇರಳ ನಿರ್ಮಾಪಕರ ಸಂಘ ಮಾಹಿತಿ ನೀಡಿದ್ದು, ‘ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂದರೆ, ಅಲ್ಲಿ ನೂರಾರು ಜನ ಕೆಲಸ ಮಾಡುತ್ತಾರೆ. ಅವರಿಗೆ ಊಟ, ಉಪಹಾರ ನೀಡಲೇಬೇಕು. ಇದೀಗ ಗ್ಯಾಸ್ ಅಭಾವದಿಂದಾಗಿ 18 ಮಲಯಾಳಂ ಸಿನಿಮಾಗಳ ಚಿತ್ರೀಕರಣ ನಿಲ್ಲಿಸಲಾಗಿದೆ. ಇದರಿಂದಾಗಿ ಚಿತ್ರರಂಗಕ್ಕೆ 5 ಕೋಟಿ ನಷ್ಟವಾಗಿದೆ. ಈಗ ಚಿತ್ರೀಕರಣ ನಿಲ್ಲಿಸಿದರೆ, ಮುಂದೂಡಿದರೆ ಬಳಿಕ ಸಿನಿಮಾ ನಿರ್ಮಾಣ ವೆಚ್ಚ ಕೂಡ ಹೆಚ್ಚಲಿದ್ದು, ನಷ್ಟ ಪ್ರಮಾಣ ಇನ್ನೂ ಅಧಿಕವಾಗಲಿದೆ’ ಎಂದು ತಿಳಿಸಿದೆ. ಈ ಬಿಸಿ ಕೇವಲ ಮಾಲಿವುಡ್‌ಗೂ ಅಷ್ಟೇ ಅಲ್ಲ ತೆಲುಗು ಹಾಗೂ ಬೆಂಗಾಲಿ ಚಿತ್ರರಂಗಕ್ಕೂ ತಟ್ಟಿದ್ದು, ಎರಡೂ ಚಿತ್ರರಂಗಗಳ ತಲಾ ಒಂದು ಸಿನಿಮಾ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.