ನಿಜಕ್ಕೂ ಇದೆಲ್ಲ ಅಸಹ್ಯ ಅನಿಸುತ್ತೆ! ನನಗೊಬ್ಬಳು ಮಗಳಿದ್ದಾಳೆ... ಬಹುಭಾಷಾ ನಟಿ ಮೀನಾ ಬೇಸರ | Actress Meena

ಹಿರಿಯ ನಟಿ ಮೀನಾ
ಹಿರಿಯ ನಟಿ ಮೀನಾ
Published on

ಪ್ರಮುಖ ಮುಖ್ಯಾಂಶಗಳು

  • 90ರ ದಶಕದ ಬಹುಬೇಡಿಕೆ ನಟಿ ಮೀನಾ ಇಂದಿಗೂ ಸಿನಿರಂಗದಲ್ಲಿ ಸಕ್ರಿಯ
  • ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟನೆ
  • ಎರಡನೇ ವಿವಾಹ ಬಗ್ಗೆ ಟ್ರೋಲ್​, ಸುಳ್ಳು ಸುದ್ದಿ ಬಗ್ಗೆ ಮೌನಮುರಿದ ನಟಿ
ಚೆನ್ನೈ: ಖ್ಯಾತ ಬಹುಭಾಷಾ ತಾರೆ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ (Actress Meena), ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದ ಮೀನಾ, ತಮಿಳಿನ ಸೂಪರ್​ಸ್ಟಾರ್​ ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ಮೀನಾ ಮಿಂಚಿದ್ದಾರೆ.

20ರ ದಶಕದಲ್ಲಿ ಮಿಂಚಿದ ನಟಿ

ಕನ್ನಡದಲ್ಲಿ ಕೆಲ ಸಮಯದವರೆಗೆ ಮಾತ್ರ ಮಿಂಚಿದ ಮೀನಾ, ನಂತರದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ನಿರತರಾದರು. ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು.
ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದನ್ನೇ ತಮ್ಮ ಹುಚ್ಚಾಟಕ್ಕೆ ಬಳಸಿಕೊಂಡಿರುವ ಕೆಲ ಕಿಡಿಗೇಡಿಗಳು, ನಟಿ ಈ ವಯಸ್ಸಿನಲ್ಲೂ ಎರಡನೇ ಮದುವೆ ಸಜ್ಜಾಗಿದ್ದಾರೆ ಎಂದೆಲ್ಲ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಸುಳ್ಳು ಸುದ್ದಿಗಳಿಂದ ತೀವ್ರ ಬೇಸರಗೊಂಡಿರುವ ಮೀನಾ, ಸ್ವತಃ ತಾವೇ ಪ್ರತಿಕ್ರಿಯಿಸುವ ಮೂಲಕ ಇದಕ್ಕೆಲ್ಲ ಸ್ಪಷ್ಟನೆ ನೀಡಿದ್ದಾರೆ.

ಮಗಳಿದ್ದಾಳೆ ಅನ್ನೋದನ್ನೇ ಮರೆತಿದ್ದಾರೆ

'ಗಲಾಟ್ಟಾ ತಮಿಳ್​'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಿರಿಯ ನಟಿ, "ಜನರು ಇನ್ನೂ ನನ್ನ ಎರಡನೇ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸುದ್ದಿಗಳನ್ನು ಹರಡುವವರು ನನಗೊಬ್ಬಳು ಮಗಳಿದ್ದಾಳೆ ಅನ್ನೋದನ್ನೇ ಮರೆತಿದ್ದಾರೆ. ಆದರೆ, ಒಂದಂತು ನಿಜ, ನನ್ನ ತಾಳ್ಮೆಯ ಕಟ್ಟೆ ಯಾವಾಗ ಒಡೆಯುತ್ತದೆ ಅಂತ ಗೊತ್ತಿಲ್ಲ. ನಾನೋರ್ವ ನಟಿ ಮತ್ತು ಮಹಿಳೆ ಎಂಬ ಕಾರಣಕ್ಕೆ, ಅವರು ತಮಗೆ ಏನು ಬೇಕೋ ಹಾಗೆಲ್ಲ ಮಾತಾಡಬಹುದು, ಬರೆಯಬಹುದು" ಎಂದು ಭಾವಿಸುತ್ತಾರೆ ಎಂದಿದ್ದಾರೆ.

ಕರ್ಮ ಬಿಡೋದಿಲ್ಲ

"ಇಂಥಾ ಸುದ್ದಿಗಳನ್ನು ನೋಡಿದಾಗ, ನನಗೆ ದುಃಖ ಮತ್ತು ಕೋಪ ಬರುತ್ತದೆ. ಸುದ್ದಿಯಲ್ಲಿ ಸ್ವಲ್ಪವಾದರೂ ಸತ್ಯವಿದ್ದರೆ, ಅದು ಸರಿಯಾಗಿರುತ್ತಿತ್ತು. ತಮ್ಮ ಕಣ್ಣಿನಿಂದಲೇ ನೋಡಿದಂತೆ ಬರೆಯುವವರ ಬಗ್ಗೆ ನಿಜಕ್ಕೂ ನನಗೆ ಅಸಹ್ಯ ಅನಿಸುತ್ತೆ. ನಾನು ಬದುಕಿನಲ್ಲಿ ತುಂಬಾ ಪಾಸಿಟಿವ್​ ಆಗಿ ಯೋಚಿಸುವವಳು. ಅನಗತ್ಯ ವಿಷಯಗಳಿಂದ ನನ್ನ ಮನಸ್ಸನ್ನು ಬೇಸರಕ್ಕೆ ದೂಡಲು ನಾನು ಸಿದ್ಧವಿಲ್ಲ. ಇನ್ನೊಬ್ಬರನ್ನು ನೋಯಿಸುವವರು ಅದರ ಪರಿಣಾಮಗಳನ್ನು ಉಣ್ಣಲೇಬೇಕು. ನನ್ನ ಜೊತೆಗಿದ್ದವರೇ ಇಂದು ತಾವು ಮಾಡಿದ ತಪ್ಪುಗಳಿಗೆ ಎಷ್ಟು ಅನುಭವಿಸಿದ್ದಾರೆ ಹಾಗೂ ಅನುಭವಿಸುತ್ತಿದ್ದಾರೆ ಎಂಬುದನ್ನು ನಾನು ನೇರವಾಗಿಯೇ ನೋಡಿದ್ದೇನೆ. ಕರ್ಮ ಈ ರೀತಿ ಸುಳ್ಳು ಸುದ್ದಿ ಹರಡುವವರನ್ನು ಖಂಡಿತ ಬಿಡುವುದಿಲ್ಲ" ಎಂದು ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net