ಈ ತೀರ್ಪು ಅನೇಕ ಜನರಿಗೆ ಅಚ್ಚರಿ ಮೂಡಿಸಬಹುದು ಆದರೆ, ಇದು ನನಗೆ ಅಚ್ಚರಿ ಮೂಡಿಸಲಿಲ್ಲ. 2020ರ ಆರಂಭದಲ್ಲೇ ಏನೋ ಸರಿಯಿಲ್ಲ ಎಂದು ನನಗೆ ಅನಿಸಲು ಪ್ರಾರಂಭಿಸಿತು. ಪ್ರಕರಣವನ್ನು ನಿರ್ವಹಿಸುವ ವಿಧಾನದಲ್ಲಿ, ವಿಶೇಷವಾಗಿ ಒಬ್ಬ ನಿರ್ದಿಷ್ಟ ಆರೋಪಿ ಕಡೆಗೆ ಬಂದಾಗ, ಪ್ರಾಸಿಕ್ಯೂಷನ್ ಸಹ ಬದಲಾವಣೆಗಳನ್ನು ಗಮನಿಸಿತು. ವರ್ಷಗಳಲ್ಲಿ ನಾನು ಹಲವಾರು ಬಾರಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ. ಅಧೀನ ನ್ಯಾಯಾಲಯವನ್ನು ನಾನು ನಂಬುವುದಿಲ್ಲ ಅಂತಾನೂ ಸ್ಪಷ್ಟವಾಗಿ ಹೇಳಿದೆ. ಆದರೆ, ಈ ಪ್ರಕರಣವನ್ನು ಅದೇ ನ್ಯಾಯಾಧೀಶರಿಂದ ದೂರ ಸರಿಸಲು ನಾನು ಮಾಡಿದ ಪ್ರತಿಯೊಂದು ವಿನಂತಿಯನ್ನು ವಜಾಗೊಳಿಸಲಾಯಿತು. ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ನಾನು ನೋವಿನಿಂದ ಕೂಡಿದ ಒಂದು ಅರಿವಿಗೆ ಬಂದಿದ್ದೇನೆ. ಅದೇನೆಂದರೆ, ಈ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ನಡೆಸಿಕೊಳ್ಳುವುದಿಲ್ಲ. ಪ್ರತಿಯೊಂದು ನ್ಯಾಯಾಲಯವೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ನನಗೆ ತಿಳಿದಿದೆ. ಈ ದೀರ್ಘ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿರುವ ನಟಿ, ನನ್ನ ವಿರುದ್ಧ ನಿಂದನೀಯ ಕಾಮೆಂಟ್‌ಗಳು ಮತ್ತು ನನ್ನ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಲು ನೀವು ಸ್ವತಂತ್ರರು. ಏಕೆಂದರೆ, ಆ ರೀತಿ ಮಾಡಲು ನೀವು ಹಣ ಪಡೆದಿರುತ್ತೀರಿ ಎಂದು ಖಡಕ್ ಮಾತುಗಳನ್ನಾಡಿದ್ದಾರೆ.