

ಈ ವರ್ಷದಲ್ಲಿ ‘ಎಲ್ 2: ಎಂಪುರಾನ್’, ‘ತುಡುರಮ್’ ಹಾಗೂ ‘ಹೃದಯಪೂರ್ವಂ’ ಯಶಸ್ಸಿನ ಬಳಿಕ ಮಲಯಾಳಂ ಜನಪ್ರಿಯ ನಟ ಮೋಹನ್‌ಲಾಲ್ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ಅದುವೇ ‘ವೃಷಭ’. ಇದೊಂದು ಪೌರಾಣಿಕ ಸಾಹಸಮಯ ಕಥೆಯಾಗಿದ್ದು, ಕನ್ನಡ ಮೂಲದ ನಿರ್ದೇಶಕ ‘ರನ್ನ’ ಖ್ಯಾತಿಯ ನಂದಕಿಶೋರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಮೂಲಕ ನಂದಕಿಶೋರ್ ಕನ್ನಡ ಗಡಿ ದಾಟಿ ಮಲಯಾಳಂಗೂ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಗೆ ಸನ್ನದ್ಧವಾಗಿದೆ. ನಾಳೆ (ಸೆ.18) ಸಿನಿಮಾದ ಟೀಸರ್ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡವು ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಪೋಸ್ಟರ್‌ನಲ್ಲಿ ಮೋಹನ್‌ಲಾಲ್ ನೋಟವೇ ರೋಮಾಂಚನವಾಗಿದ್ದು, ಗಮನಸೆಳೆಯುತ್ತದೆ. ದೇಹಕ್ಕೆ ಕವಚ ತೊಟ್ಟಿರುವ ಅವರು, ತ್ರಿಶೂಲ ಆಕಾರದ ಆಯುಧ ಕೈಯಲ್ಲಿ ಇಡಿದಿದ್ದಾರೆ. ಮೋಹನ್‌ಲಾಲ್ ನೋಟ ಹಾಗೂ ವಸಗಳನ್ನು ಗಮನಿಸಿದರೆ ಇದೊಂದು ಶಿವನ ಹಿನ್ನೆಲೆಯ ಕಥೆ ಎಂದು ಗುರುತಿಸಬಹುದು. ಇದೇ ಅಕ್ಟೋಬರ್ 16ಕ್ಕೆ ‘ವೃಷಭ’ ಐದು ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.
ಬಹುನಿರೀಕ್ಷಿತ ‘ವೃಷಭ’ ಚಿತ್ರಕ್ಕೆ ಕನ್ನಡಿಗ ನಂದ್‌ಕಿಶೋರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಾಗೆಯೇ ಕಲಾ ಹಾಗೂ ತಾಂತ್ರಿಕ ಬಳಗದಲ್ಲಿ ಹಲವು ಕನ್ನಡಿಗರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಇಂದ್ರಜಿತ್ ಲಂಕೇಶ್ ಪುತ್ರ, ‘ಗೌರಿ’ ಖ್ಯಾತಿಯ ಸಮರ್ಜಿತ್ ‘ವೃಷಭ’ದಲ್ಲಿ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ, ಗರುಡ ರಾಮ್, ರಘು ಹೊಂಡದಕೇರಿ ಕಲಾಬಳಗದಲ್ಲಿದ್ದಾರೆ. ಇನ್ನು ತಾಂತ್ರಿಕ ಬಳಗದಲ್ಲಿ ಸಂಕಲನಕಾರ ಕೆ.ಎಂ.ಪ್ರಕಾಶ್ ‘ವೃಷಭ’ಗೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಕನ್ನಡ ಕಲಾವಿದರ ಜತೆಗೆ ಬಾಲಿವುಡ್‌ನ ಶನಯಾ ಕಪೂರ್, ಜಹ್ರಾ ಎಸ್.ಖಾನ್, ತೆಲುಗಿನ ಶ್ರೀಕಾಂತ್ ಸೇರಿ ಹಲವು ಪರಭಾಷೆಯ ಕಲಾವಿದರು ನಟಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಮೊದಲ ಹೈ ಬಜೆಟ್ ಚಿತ್ರ ಇದಾಗಿದೆ.
ನಟ ಮೋಹನ್‌ಲಾಲ್ 2025ರಲ್ಲಿ ಮುಟ್ಟಿದ್ದೆಲ್ಲೆವು ಚಿನ್ನವಾಗಿದೆ. ಅವರ ನಟನೆಯ ಈ ವರ್ಷದ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ. ‘ಎಲ್ 2: ಎಂಪುರಾನ್’ (265 ಕೋಟಿ ರೂ.), ‘ತುಡುರಮ್’ (235 ಕೋಟಿ ರೂ.) ಹಾಗೆಯೇ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಹೃದಯಪೂರ್ವಂ’ ಈಗಾಗಲೇ 70 ಕೋಟಿ ರೂ. ಗಳಿಸಿದ್ದು, 100 ಕೋಟಿ ರೂ. ಕ್ಲಬ್‌ನತ್ತ ದಾಪುಗಾಲಿಡುತ್ತಿದೆ. ಹೀಗಿರುವಾಗಲೇ ಮೋಹನ್‌ಲಾಲ್ ಮತ್ತೊಂದು ಬಿಗ್‌ಬಜೆಟ್‌ನ ಪೌರಾಣಿಕ ಸಿನಿಮಾದ ಮೂಲಕ ಬಾಕ್ಸಾಫೀಸ್‌ನಲ್ಲಿ ಧೂಳ್ ಎಬ್ಬಿಸಲು ಸಿದ್ಧರಾಗುತ್ತಿದ್ದಾರೆ.