

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ನಟ ರತ್ ಶೆಟ್ಟಿ "ಸಪ್ತಸಾಗರದಾಚೆ ಎಲ್ಲೋ' ಸೈಡ್ಗಳ ಬಳಿಕ ಮತ್ತೆ ಕಾಣಿಸದೇ ಇರಬಹುದು. ಆದರೆ, ನಿರ್ಮಾಪಕ ರತ್ ಶೆಟ್ಟಿ ಬಿಜಿಯಾಗಿದ್ದಾರೆ. ಕಳೆದ ವರ್ಷ "ಬ್ಯಾಚುಲರ್ ಪಾರ್ಟಿ' ಮತ್ತು "ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಗಳನ್ನು ನಿರ್ಮಿಸಿದ್ದ ರತ್ ಈ ವರ್ಷಾರಂಭದಲ್ಲೇ "ಮಿಥ್ಯ' ಎಂಬ ಅನನ್ಯ ಅನುಭವವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಆತನ ಹೆಸರು ಮಿಥುನ್. ಎಲ್ಲರೂ ಮಿಥ್ಯ ಎಂದು ಕರೆಯುತ್ತಾರೆ. ಮುಂಬೈನಲ್ಲಿ ಅಪ್ಪ, ಅಮ್ಮ ಮತ್ತು ತಂಗಿ ವಂದನಾ ಜತೆ ವಾಸ. ಆದರೆ, 11 ವರ್ಷದ ಹುಡುಗನ ಬಾಳಲ್ಲಿ ಬಿರುಗಾಳಿ ಎದ್ದು, ಅನಾಥನಾಗುತ್ತಾನೆ. ತಂಗಿ ಜತೆ ಮುಂಬೈ ತೊರೆದು ಉಡುಪಿಯ ಸಂಬಂಧಿಕರ ಮನೆಗೆ ಬರುತ್ತಾನೆ. ಮರಾಠಿ ಓದುತ್ತಿದ್ದವನು ಇಲ್ಲಿ ಕನ್ನಡ ಶಾಲೆ ಸೇರುತ್ತಾನೆ. ಹೊಸ ಜಾಗ, ಭಾಷೆ, ಜನ, ಸಂಬಂಧಗಳು, ಪರಿಸರಕ್ಕೆ ಹೊಂದಿಕೊಳ್ಳಲು, ತನ್ನವರು ಯಾರು? ಎಂಬುದನ್ನು ಅರಿಯಲು ಪರದಾಡುತ್ತಾನೆ. ಅದರ ನಡುವೆಯೇ ಆತನ ತಂದೆ ಮತ್ತು ತಾಯಿಯ ಮನೆಯವರು ಮಿಥ್ಯನ ಕಸ್ಟಡಿ ಪಡೆಯಲು ಕೋರ್ಟ್ ಮೆಟ್ಟಿಲೇರುತ್ತಾರೆ. ಹೀಗೆ ಡೋಲಾಯಮಾನ ಪರಿಸ್ಥಿತಿಗಳಿಗೆ ಸಿಲುಕುವ ಬದುಕಿನಲ್ಲಿ ಹೊಸ ಹೊಸ ತಿರುವುಗಳಿಗೆ ಹೊಂದಿಕೊಳ್ಳಲು ಹೆಣಗುವ ಮಿಥ್ಯನ ಮಾನಸಿಕ ಯಾತನೆಗಳ ಸುತ್ತ ಕಥೆ ಸಾಗುತ್ತದೆ.
ಮಿಥ್ಯನ ದೃಷ್ಟಿಕೋನದಲ್ಲೇ ನಿರ್ದೇಶಕ ಸುಮಂತ್ ಭಟ್ ಚಿತ್ರವನ್ನು ನಿರೂಪಿಸಿದ್ದಾರೆ. ಮಿಥ್ಯನ ಸಣ್ಣ ಸಣ್ಣ ಖುಷಿಗಳನ್ನು ಸಂಭ್ರಮಿಸುವ ಪ್ರೇಕ್ಷಕ, ಭವಿಷ್ಯದ ಅರಿವಿಲ್ಲದೇ ಬಾಲ್ಯದಲ್ಲೇ ಬೇಯುವ ಆತನ ನೋವುಗಳನ್ನೂ ಅನುಭವಿಸುತ್ತಾನೆ. ಮೊದಲ ನಿರ್ದೇಶನದಲ್ಲೇ ಸುಮಂತ್ ಮೆದುಳನ್ನು ದಾಟಿ, ಮನಸ್ಸನ್ನು ಮೀಟುವ ಕಥೆ ಹೆಣೆದಿದ್ದಾರೆ. ಅದಕ್ಕೆ ತಕ್ಕಂತೆ ಮಿಥ್ಯನ ಪಾತ್ರವನ್ನು ಮಾಸ್ಟರ್ ಅತಿಶ್ ಶೆಟ್ಟಿ ಜೀವಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ಪ್ರಕಾಶ್ ತುಮ್ಮಿನಾಡು ಇಷ್ಟವಾಗುತ್ತಾರೆ.