‘ಬಾಘಿ-4’ರಲ್ಲಿ ಮಿಸ್ ಯೂನಿವರ್ಸ್: ಬಾಲಿವುಡ್ ಪ್ರವೇಶಿಸಿದ ಪಂಜಾಬಿ ಮಾಡೆಲ್ ಹರ್ನಾಜ್‌ ಸಂಧು

haaranaaz
Published on

ಕನ್ನಡದ ನಿರ್ದೇಶಕ ಎ.ಹರ್ಷ ‘ಬಾಘಿ-4’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಇದು ಹಿಂದಿಯ ‘ಬಾಘಿ’ ಸರಣಿಯ ನಾಲ್ಕನೇ ಚಿತ್ರವಾಗಿದ್ದು, ಟೈಗರ್ ಶ್ರಾಫ್ ನಾಯಕನ ಪಾತ್ರದಲ್ಲಿ ಮುಂದುವರಿದಿದ್ದಾರೆ. ಇತ್ತೀಚೆಗಷ್ಟೆ ಸಂಜಯ್ ದತ್ ಮತ್ತು ಸೋನಂ ಬಾಜ್ವಾ ಮುಖ್ಯ ಭೂಮಿಕೆಗೆ ಆಯ್ಕೆಯಾಗಿದ್ದರು. ಇದೀಗ ಚಿತ್ರತಂಡದಿಂದ ಮತ್ತೊಂದು ವಿಚಾರ ಹೊರಬಿದ್ದಿದ್ದು, 2021ರ ಮಿಸ್ ಯೂನಿವರ್ಸ್ ಹರ್ನಾಜ್‌ ಸಂಧು ನಾಯಕಿಯಾಗಿ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಸುಶ್ಮಿತಾ ಸೇನ್, ಲಾರಾ ದತ್ತಾ ಬಳಿಕ ಮತ್ತೊಬ್ಬ ಮಿಸ್ ಯೂನಿವರ್ಸ್ ಬಾಲಿವುಡ್‌ಗೆ ಪ್ರವೇಶ ಪಡೆದಂತಾಗಿದೆ. ಈ ಬಗ್ಗೆ ಹರ್ನಾಜ್‌ ಸಂಧು ‘ಮಿಸ್ ಯೂನಿವರ್ಸ್ ಆದ ಮೂರು ವರ್ಷದ ಬಳಿಕ ನಾನು ‘ಬಾಘಿ-4’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದೇನೆ. ಈ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದೇನೆ. ಅವಕಾಶ ನೀಡಿದ್ದಕ್ಕೆ ನಿರ್ಮಾಪಕ ಸಾಜಿದ್‌ಗೆ ನಾನು ಆಭಾರಿ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಹರ್ನಾಜ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿರುವ ಚಿತ್ರತಂಡ 2025ರ ಸೆಪ್ಟೆಂಬರ್ 5ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net