

ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ
ನಿರ್ದೇಶನ : ಪಿ. ಮಹೇಶ್ ಬಾಬು
ನಿರ್ಮಾಣ: ಯೂವಿ ಕ್ರಿಯೇಷನ್ಸ್
ತಾರಾಗಣ: ಅನುಷ್ಕಾ ಶೆಟ್ಟಿ, ನವೀನ್ ಪೊಲಿಶೆಟ್ಟಿ, ಜಯಸುಧಾ, ನಾಸರ್, ಮುರಳಿ ಶರ್ಮಾ, ತುಳಸಿ, ಅಭಿನವ್ ಮುಂತಾದವರು.
ವಿಷಯಾಧಾರಿತ ಸಿನಿಮಾಗಳ ಪರ್ವಕಾಲವಿದು. ಹೀಗಾಗಿಯೇ ಭಿನ್ನ, ವಿಭಿನ್ನ ವಿಷಯಗಳ ಕುರಿತ ಚಿತ್ರಗಳು ಬರುತ್ತಿವೆ. ಅದೇ ಸಾಲಿಗೆ ಸೇರುವ ಸಿನಿಮಾ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’. ಪ್ರೀತಿ, ಮದುವೆಯನ್ನು ನಂಬದ ಹುಡುಗಿ, ಪ್ರೀತಿಯೇ ಸರ್ವಸ್ವ ಎನ್ನುವ ಹುಡುಗನ ನಡುವಿನ ಲವ್-ಹೇಟ್ ಸ್ಟೋರಿಯಿದು. ಅದಕ್ಕೆ ಹಾಸ್ಯದ ಸ್ಪರ್ಶ ನೀಡಿ ರಸವತ್ತಾಗಿ ತೆರೆಗೆ ತಂದಿದ್ದಾರೆ ಯುವನಿರ್ದೇಶಕ ಮಹೇಶ್ ಬಾಬು.
ಆಕೆ ಲಂಡನ್‌ನ ಹೆಸರಾಂತ ರೆಸ್ಟೋರೆಂಟ್‌ನ ಮಾಸ್ಟರ್ ಶೆಫ್ ಅನ್ವಿತಾ ರಾವಾಲಿ ಶೆಟ್ಟಿ (ಅನುಷ್ಕಾ). ತಂದೆ, ತಾಯಿಗೆ ಮಾಡಿದ ದ್ರೋಹದಿಂದ ಪ್ರೀತಿ, ಮದುವೆ, ಸಂಸಾರಗಳ ಬಗ್ಗೆ ಈ ಮಗಳು ನಂಬಿಕೆ ಕಳೆದುಕೊಂಡಿರುತ್ತಾಳೆ. ಹೀಗಾಗಿ ಅನ್ವಿತಾಗೆ ಅಮ್ಮನೇ (ಜಯಸುಧಾ) ಪ್ರಪಂಚ. ಅಮ್ಮ ಖಾಯಿಲೆಗೆ ಬಲಿಯಾದ ಬಳಿಕ ಅನ್ವಿತಾ ಒಂಟಿಯಾಗುತ್ತಾಳೆ. ತಾಯಿ-ಮಗುವಿನ ಸಂಬಂಧಕ್ಕಿಂತ ಮೇಲಾದ ಬೇರೆ ಸಂಬಂಧವಿಲ್ಲ ಎಂದು ಯೋಚಿಸಿ, ಅನ್ವಿತಾ ಮಗು ಪಡೆಯಲು ಮುಂದಾಗುತ್ತಾಳೆ. ಆದರೆ, ಮದುವೆಯಾಗದೇ ಮಗು ಪಡೆಯಬೇಕು ಅನ್ನೋದು ಆಕೆಯ ನಿರ್ಧಾರ. ‘ಶೆಫ್ ಆಗಿ ಅಡುಗೆ ಮಾಡಬೇಕಾದರೇನೇ ಉಪ್ಪು, ಹುಳಿ, ಖಾರ, ಸಿಹಿ, ಮಸಾಲೆ ಎಷ್ಟಿರಬೇಕು? ಅಂತ ಅಳೆದು ತೂಗಿ, ರುಚಿಯಾಗಿ ಮಾಡುತ್ತೇನೆ. ಇನ್ನು ಮಗು ಬೇಕು ಅಂದಾಗ, ತಂದೆಯ ಹಿನ್ನೆಲೆ, ವಂಶದ ಬಗ್ಗೆ ತಿಳಿದುಕೊಳ್ಳದೇ ಹೇಗೆ?’ ಎನ್ನುವ ಆಕೆ ಅಂಡಾಣು ಪಡೆಯಲು ಉತ್ತಮ ಜೀನ್ಸ್ ಇರುವ, ವಂಶದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಹುಡುಗನನ್ನು ಹುಡುಕತೊಡಗುತ್ತಾಳೆ. ಆಗ ಫುಲ್ ಟೈಮ್ ಐಟಿ ಉದ್ಯೋಗಿ, ಪಾರ್ಟ್ ಟೈಮ್ ಸ್ಟಾೃಂಡಪ್ ಕಲಾವಿದ, ಅನ್ವಿತಾಗಿಂತ ಐದು ವರ್ಷ ಕಿರಿಯನಾದ ಸಿದ್ದು ಪೊಲಿಶೆಟ್ಟಿ (ನವೀನ್) ಪರಿಚಯವಾಗುತ್ತದೆ. ಮುಂದೆ? ಅವರಿಬ್ಬರ ನಡುವಿನ ಜುಗಲ್‌ಬಂದಿ- ಜಗಳ್‌ಬಂದಿಯ ಸುತ್ತ ಕಥೆ ಸಾಗುತ್ತದೆ.
ಐಯುಐ (ಇಂಟ್ರಾಯುಟೆರಿನ್ ಇನ್ಸೆಮಿನೇಷನ್ ) ಅರ್ಥಾತ್ ಗರ್ಭಾಶಯದ ಗರ್ಭಧಾರಣೆ. ಇದು ಭಾರತದಲ್ಲಿ ಅಪರೂಪವಾದರೂ, ಕಡಿಮೆ ವೆಚ್ಚದಲ್ಲಿ ಸಿಗುವ ಟ್ರೀಟ್ಮೆಂಟ್ ಆದ ಕಾರಣ ಇತ್ತೀಚಿನ ವರ್ಷಗಳಲ್ಲಿ ಏರಿಕೆ ಕಂಡಿದೆ. ಇಂತಹ ಒಂದು ಕೇಸ್ ಸುತ್ತ ನಡೆಯುವ ಗಂಭೀರ ವಿಷಯಕ್ಕೆ ಹಾಸ್ಯದ ಲೇಪನ ಹಚ್ಚಿ ಚಿತ್ರಾದ್ಯಂತ ಕಚಗುಳಿ ಇಡುತ್ತಾ ಸಾಗುತ್ತಾರೆ ನಿರ್ದೇಶಕ ಮಹೇಶ್. ಐದು ವರ್ಷಗಳ ಬಳಿಕ ಅನುಷ್ಕಾ ಶೆಟ್ಟಿಯನ್ನು ಬಿಗ್‌ಸ್ಕ್ರೀನ್ ಮೇಲೆ ನೋಡುವುದೇ ಚಂದ. ನವೀನ್ ಪೊಲಿಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ಪಕ್ವವಾಗುತ್ತಿದ್ದಾರೆ. ಅನುಷ್ಕಾ, ನವೀನ್ ನಡುವಿನ ಕೆಮಿಸ್ಟ್ರಿ, ಕಾಮಿಡಿ ಚಿತ್ರವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತವೆ. ಒಂದೊಳ್ಳೆ ವಿಷಯಾಧಾರಿತ ಸಿನಿಮಾ ನೋಡಿ ನಕ್ಕು ಎಂಜಾಯ್ ಮಾಡಲು ಇಚ್ಛಿಸುವವರಿಗೆ ಈ ಚಿತ್ರ ಉತ್ತಮ ಆಯ್ಕೆ.
ಸ್ಟಾರ್ : 3.5