MINCHUHULU FILM REVIEW: ಬೆಳಕು ಕಾಣಲು ಹೊರಟವನ ಕಥೆ

minchu hulu
Published on


ಚಿತ್ರ: ‘ಮಿಂಚುಹುಳು’
ನಿರ್ದೇಶಕ: ಮಹೇಶ್ ಕುಮಾರ್
ತಾರಾಗಣ: ಮಾಸ್ಟರ್ ಪ್ರೀತಂ, ಪೃಥ್ವಿರಾಜ್ ರಾಜಕುಮಾರ್, ಪರಶಿವಮೂರ್ತಿ, ರಶ್ಮಿಗೌಡ ಮತ್ತಿತರರು.
ರೇಟಿಂಗ್: 3

ಶಿವ ಸ್ಥಾವರಮಠ
‘ಜೀವನದ ಕೊರತೆಗಳನ್ನು ನೀಗಿಸಿಕೊಳ್ಳಲು ನಾವೇ ಸ್ವಂತ ಮಾರ್ಗ ಹುಡುಕಿಕೊಳ್ಳಬೇಕೆ ವಿನಾ, ಬೇರೆಯವರನ್ನು ಅವಲಂಬಿಸಬಾರದು’ ಎಂದು ಹೋಮ್‌ವರ್ಕ್ ಮಾಡದ ವಿದ್ಯಾರ್ಥಿಗೆ ಶಿಕ್ಷಕಿ (ರಶ್ಮಿಗೌಡ) ಹೇಳುತ್ತಾರೆ. ಈ ಮಾತಿನ ಬಳಿಕ ಬಡ ವಿದ್ಯಾರ್ಥಿ ಕಿರಣ್ (ಪ್ರೀತಂ) ಬದುಕು ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತದೆ. ಈ ಸಾಹಸಯಾನವನ್ನು ನಿರ್ದೇಶಕ ಮಹೇಶ್ ಕುಮಾರ್ ‘ಮಿಂಚುಹುಳು’ ಮೂಲಕ ನಿರೂಪಿಸಿದ್ದಾರೆ.

ಬಡವನಾಗಿದ್ದರೂ ಪ್ರತಿಭಾವಂತ ವಿದ್ಯಾರ್ಥಿ ಕಿರಣ್. ಆದರೆ, ತಂದೆ (ಪರಶಿವಮೂರ್ತಿ) ಮಾಡಿಕೊಂಡ ಸಾಲದಿಂದಾಗಿ ಬೀದಿಗೆ ಬೀಳುತ್ತಾರೆ. ನೆಲೆ ಕಂಡಕೊಳ್ಳಲು ಸ್ನೇಹಿತರ ಮೂಲಕ ಒಂದು ಹಳೆ ಕಾಲದ ಮನೆ ಸೇರುತ್ತಾರೆ. ಆದರೆ, ಅಲ್ಲಿ ವಿದ್ಯುತ್ ಇರುವುದಿಲ್ಲ. ಇದರಿಂದ ಕಿರಣ್ ವ್ಯಾಸಂಗಕ್ಕೆ ತೊಂದರೆಯಾಗುತ್ತದೆ. ಬಳಿಕ ಆ ಬಾಲಕ ತಾನೇ ಹಣ ಸಂಪಾದಿಸಿ ವಿದ್ಯುತ್ ಸಂಪರ್ಕ ಪಡೆಯಲು ಮುಂದಾಗುತ್ತಾನಾದರೂ, ಅದು ಕೈಗೂಡುವುದಿಲ್ಲ. ಆಗ ರಾತ್ರಿ ವೇಳೆ ಮನೆಯಲ್ಲಿ ಕಾಣುವ ಮಿಂಚುಹುಳಗಳೇ ಕಿರಣ್‌ನಲ್ಲಿ ಹೊಸ ಆಲೋಚನೆ ಹುಟ್ಟಿಕೊಳ್ಳಲು ಕಾರಣವಾಗುತ್ತವೆ. ಬಳಿಕ ಆತ ಸಾಧಕನಾಗುತ್ತಾನೆ. ಆ ಬಾಲಕನಲ್ಲಿ ಮೂಡಿದ ಅಂತಹ ಆಲೋಚನೆ ಏನು? ತಿಳಿಯಲು ಸಿನಿಮಾ ನೋಡಿ.

ನಿರ್ದೇಶಕ ಮಹೇಶ್ ‘ಮಿಂಚುಹುಳ’ ಮೂಲಕ ಮಕ್ಕಳಿಗೆ ಸ್ಫೂರ್ತಿದಾಯಕ ಕಥೆ ಹೇಳಿದ್ದಾರೆ. ಮೊದಲರ್ಧದಲ್ಲಿ ತಂದೆ-ಮಗನ ನಡುವೆ ಸಾಗುವ ಕಥೆ ಸ್ವಲ್ಪ ನಿಧಾನವೆನಿಸುತ್ತದೆಯಾದರೂ ವಿರಾಮದ ಬಳಿಕ ವೇಗ ಪಡೆದುಕೊಳ್ಳುತ್ತದೆ. ಕೆಲವು ಕೊರತೆಗಳ ಮಧ್ಯೆ, ಕಥೆ ನೋಡಿಸಿಕೊಳ್ಳುತ್ತದೆ. ಬಾಲನಟ ಪ್ರೀತಂ ಮನೋಜ್ಞವಾಗಿ ಅಭಿನಯಿಸಿದ್ದು, ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳುವ ಪ್ರತಿಭೆ ಇದೆ. ‘ದೊಡ್ಮನೆ’ ಕುಡಿ ಪೃಥ್ವಿರಾಜ್ ರಾಜಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲೈಮಾಕ್ಸ್‌ನಲ್ಲಿ ತಂದೆ ಪಾತ್ರಧಾರಿ ಪರಶಿವಮೂರ್ತಿ ಅಭಿನಯ ಗಮನಸೆಳೆಯುತ್ತದೆ. ಮಕ್ಕಳಿಗೆ ಇಷ್ಟವಾಗುವ ‘ಮಿಂಚುಹುಳ’ವನ್ನು ಒಮ್ಮೆ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net