ಫೆ.7ಕ್ಕೆ ರಾಘವ ಅನ್​ಲಾಕ್​; ಮಿಲಿಂದ್​, ರೇಚೆಲ್​ ನಟಿಸಿರುವ ರೊಮ್ಯಾಂಟಿಕ್​ ಕಾಮಿಡಿ

vsdvsdvds
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಮಿಲಿಂದ್​ ಮತ್ತು "ಲವ್​ ಮಾಕ್ಟೇಲ್​' ಖ್ಯಾತಿಯ ರೇಚೆಲ್​ ಡೇವಿಡ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ದೀಪಕ್​ ಮಧುವನಹಳ್ಳಿ ನಿರ್ದೇಶನದ ಸಿನಿಮಾ "ಅನ್​ಲಾಕ್​ ರಾಘವ'. ಇತ್ತೀಚೆಗಷ್ಟೆ ಚಿತ್ರತಂಡ ರಿಲೀಸ್​ ಡೇಟ್​ ಘೋಷಿಸಿದ್ದು, ಫೆ. 7ರಂದು ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದೆ. "ಅನ್​ಲಾಕ್​ ರಾಘವ'ನ ಬಗ್ಗೆ ನಿರ್ದೇಶಕ ದೀಪಕ್​, "ನನ್ನ ಹಿಂದಿನ ಸಿನಿಮಾಗಳನ್ನು ನೋಡಿದ್ದ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್​ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಇದೀಗ "ಅನ್​ಲಾಕ್​ ರಾಘವ' ಚಿತ್ರದ ಫಸ್ಟ್​ ಲುಕ್​ ನೋಡಿ ನೀನೊಬ್ಬ ಕಮರ್ಷಿಯಲ್​ ನಿರ್ದೇಶಕ ಅಂತಿದ್ದಾರೆ. ಇದೊಂದು ಪಕ್ಕಾ ಮನರಂಜನೆಯ ರಸದೌತಣ ನೀಡುವ, ಪ್ರೇಕ್ಷಕರು ನೀಡುವ ದುಡ್ಡಿಗೆ ಮೋಸ ಮಾಡದ ಸಿನಿಮಾ' ಎಂದು ಹೇಳಿಕೊಂಡರು.

ಚಿತ್ರದ ಬಹುತೇಕ ಶೂಟಿಂಗ್​ ಚಿತ್ರುದರ್ಗದಲ್ಲಿ ನಡೆದಿದೆ. ನಾಯಕ ಮಿಲಿಂದ್​, "ಇತ್ತೀಚೆಗೆ ಚಿತ್ರದ ಟೆಕ್ಸಿಕಲ್​ ಶೋ ಆಯೋಜಿಸಿದ್ದೆವು. ಅಲ್ಲಿ ಸಿನಿಮಾ ನೋಡಿದ ಎಲ್ಲರ ಮುಖದಲ್ಲೂ ಭರವಸೆಯು ನಗು ಮೂಡಿತ್ತು. ಆ ನಗು ಪ್ರೇಕ್ಷಕರ ಮುಖದಲ್ಲೂ ಮೂಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ರೇಚೆಲ್​, "ದೀಪಕ್​ ಈ ಕಥೆ ಹೇಳಿದಾಗಲೇ ನಟಿಸಲು ನಿರ್ಧರಿಸಿದ್ದೆ. ಅಷ್ಟು ಸುಂದರ ಕಥೆಯಿದೆ. ನಾನಿಲ್ಲಿ ಜಾನಕಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ' ಎಂದರು.

ಮಿಲಿಂದ್​, ರೇಚೆಲ್​ ಜತೆ ಸಾಧುಕೋಕಿಲ, ಶೋಭರಾಜ್​, ಅವಿನಾಶ್​, ಭೂಮಿ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. "ರಾಮಾ ರಾಮಾ ರೇ' ನಿರ್ದೇಶಕ ಸತ್ಯಪ್ರಕಾಶ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಲವಿತ್​ ಛಾಯಾಗ್ರಹಣ, ಅನೂಪ್​ ಸೀಳಿನ್​ ಸಂಗೀತದಲ್ಲಿ ಮೂಡಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net