ಸ್ವಿಮ್ಮರ್ ಮಿಲನಾ; ಕೃಷ್ಣ ನಿರ್ದೇಶನದಲ್ಲಿ ಹೊಸ ಚಿತ್ರ ಮಿಲಿ

Mili
Published on

ಬೆಂಗಳೂರು: ನಟಿ ಮಿಲನಾ ನಾಗರಾಜ್ ಚಿಕ್ಕಂದಿನಿಂದಲೂ ಸ್ವಿಮ್ಮಿಂಗ್​ನಲ್ಲಿ ಮುಂದು. ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿಯೂ ಅವರು ಭಾಗವಹಿಸಿದ್ದರಂತೆ. ಈ ವಿಚಾರವನ್ನು ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದೂ ಉಂಟು. ಇದೀಗ ರೀಲ್​ನಲ್ಲಿಯೂ ಅದೇ ಪಾತ್ರವನ್ನು ಮಾಡಲು ತಯಾರಿ ನಡೆಸಿದ್ದಾರೆ. ಅಂದರೆ ಸ್ವಿಮ್ಮಿಂಗ್​ಗೆ ಸಂಬಂಧಿಸಿದ ‘ಮಿಲಿ’ ಅನ್ನೋ ಸಿನಿಮಾದಲ್ಲಿ ಮಿಲನಾ ನಟಿಸಲಿದ್ದಾರೆ.

ನಿರ್ದೇಶಕರು ಯಾರು, ಸಿನಿಮಾ ಯಾವಾಗಿನಿಂದ ಶುರು? ಈ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಬೇರಾರೂ ಅಲ್ಲ ಮಿಲನಾ ಪತಿ, ನಟ ‘ಡಾರ್ಲಿಂಗ್’ ಕೃಷ್ಣ! ಮಿಲನಾ ಅಥ್ಲೀಟ್ ಆಗಿರುವುದರಿಂದ ಅದನ್ನೇ ಕಥೆಯನ್ನಾಗಿಸಿ ಏಕೆ ಸಿನಿಮಾ ಮಾಡಬಾರದೆಂಬ ಆಲೋಚನೆ ಬಂತಂತೆ. ಆಗ ಶುರುವಾಗಿದ್ದೇ ಈ ‘ಮಿಲಿ’.

ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡುವ ಮಿಲನಾ, ‘ಸದ್ಯಕ್ಕೆ ಚಿತ್ರದ ಶೀರ್ಷಿಕೆ ನೋಂದಣಿ ಮಾಡಿಸಿದ್ದೇವೆ. ‘ಲವ್ ಮಾಕ್​ಟೇಲ್ 2’ ಸಿನಿಮಾ ಮುಗಿದ ಮೇಲೆ ಈ ಚಿತ್ರ ಶುರು ಮಾಡುವ ಪ್ಲಾನ್ ಇದೆ. ನಾನೇ ಸ್ವಿಮ್ಮರ್ ಆಗಿರುವುದರಿಂದ ತಯಾರಿ ವಿಚಾರದಲ್ಲಿ ಹೆಚ್ಚಿನ ಸಮಯ ಬೇಕಿಲ್ಲ. ಕಥೆ ಡೆವಲಪ್ ಮಾಡಲು ಸಮಯ ತೆಗೆದುಕೊಳ್ಳಲಿದ್ದೇವೆ’ ಎಂಬುದು ಮಿಲನಾ ಮಾತು. ಸದ್ಯ ಈ ಸಿನಿಮಾ ಇನ್ನೂ ಪ್ಲಾನಿಂಗ್ ಹಂತದಲ್ಲಿದೆ. ಒಂದೆಳೆ ಮಾತ್ರ ಸಿದ್ಧವಾಗಿದ್ದು, ಅದಕ್ಕೆ ಪೂರಕ ಕಂಟೆಂಟ್ ಸೃಷ್ಟಿಸಲು ಹಲವರನ್ನು ಭೇಟಿ ಮಾಡಲು ಈ ತಾರಾ ಜೋಡಿ ನಿರ್ಧರಿಸಿದೆ. ಅವರಿಂದ ಪಡೆದ ಅಂಶಗಳನ್ನು ಚಿತ್ರಕಥೆಯಲ್ಲಿ ನಿರ್ದೇಶಕ ಕೃಷ್ಣ ಬೆರೆಸಲಿದ್ದಾರೆ. ಅದಾದ ಬಳಿಕ ತಾಂತ್ರಿಕ ವರ್ಗದ ಆಯ್ಕೆ ನಡೆಯಲಿದೆಯಂತೆ. ಸದ್ಯಕ್ಕೆ ‘ಲವ್ ಮಾಕ್​ಟೇಲ್ 2’ ಕೆಲಸದಲ್ಲಿ ಮಿಲನಾ ಮತ್ತು ಕೃಷ್ಣ ಜೋಡಿ ಬಿಜಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net