ಮಿ.ಬ್ಯಾಚುಲರ್​ಗೆ ಮಿಲನಾ ಸಾಥ್; 3ನೇ ಬಾರಿ ಬದಲಾಯ್ತು ಶೀರ್ಷಿಕೆ

Ullasa Milana
Published on

ಬೆಂಗಳೂರು: ‘ಮದರಂಗಿ’ ಕೃಷ್ಣ ಅಭಿನಯದ ಹೊಸ ಚಿತ್ರದ ಹೆಸರು ಮತ್ತೊಮ್ಮೆ ಬದಲಾಗಿದೆ. ಚಿತ್ರ ಪ್ರಾರಂಭವಾದಾಗ ‘ವರ್ಜಿನ್’ ಎಂಬ ಹೆಸರಿಡಲಾಗಿತ್ತು. ಯಾಕೋ ಸರಿಹೋಗುತ್ತಿಲ್ಲ, ಎಂದು ಚಿತ್ರಕ್ಕೆ ಮರುನಾಮಕರಣ ಮಾಡಲಾಯಿತು. ‘ವರ್ಜಿನ್’ ಬದಲು ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಹೆಸರು ಬದಲಾಯಿಸಲಾಯಿತು. ಇದೀಗ ಚಿತ್ರಕ್ಕೆ ‘ಮಿಸ್ಟರ್ ಬ್ಯಾಚುಲರ್’ ಎಂಬ ಹೆಸರು ಫೈನಲ್ ಆಗಿದ್ದು, ಇತ್ತೀಚೆಗೆ ಪೋಸ್ಟರ್ ಬಿಡುಗಡೆಯಾಗಿದೆ.

ನಾಯ್ಡು ನಿರ್ದೇಶನ ಮಾಡಿರುವ ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಶೈಲಿಯ ಚಿತ್ರ. ಚಿತ್ರದಲ್ಲಿ ಐಟಿ ಕಂಪನಿ ಉದ್ಯೋಗಿಯಾಗಿ ಕೃಷ್ಣ ಕಾಣಿಸಿಕೊಳ್ಳಲಿದ್ದು, ಮದುವೆ ಆಗುವುದು ಕಥಾನಾಯಕನ ಬಹುದೊಡ್ಡ ಕನಸಾಗಿರುತ್ತದೆ. ಅದನ್ನು ಆತ ಈಡೇರಿಸಿಕೊಳ್ಳುತ್ತಾನಾ ಎಂಬುದೇ ‘ಮಿ. ಬ್ಯಾಚುಲರ್’ ಚಿತ್ರದ ಎಳೆ. ಈ ಚಿತ್ರದಲ್ಲಿ ಕೃಷ್ಣ ಅವರಿಗೆ ಕರಾವಳಿ ಬೆಡಗಿ ನಿಮಿಕಾ ರತ್ನಾಕರ್ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷವೆಂದರೆ, ಕೃಷ್ಣ ಅವರ ಭಾವಿ ಪತ್ನಿ ಮಿಲನಾ ನಾಗರಾಜ್ ಸಹ ಸಾಥ್ ನೀಡಿದ್ದು, ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕೃಷ್ಣ ಮತ್ತು ಮಿಲನಾ ಇದಕ್ಕೂ ಮುನ್ನ ‘ನಮ್ ದುನಿಯಾ ನಮ್ ಸ್ಟೈಲ್’, ‘ಚಾರ್ಲಿ’ ಮತ್ತು ‘ಲವ್ ಮಾಕ್ಟೇಲ್’ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು. ಈಗ ಈ ಚಿತ್ರದಲ್ಲಿ ಮಿಲನಾ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net