ಲವ್ ಬರ್ಡ್ಸ್​ಗೆ ಮಿಲನಾ; ಮದುವೆ ಆದ ಮೇಲಿನ ಪ್ರೀತಿಯ ಕಥೆ..

Love Birds
Published on

ಬೆಂಗಳೂರು: ಕಳೆದ ವರ್ಷದ ಅಕ್ಟೋಬರ್​ನಲ್ಲೇ ಚಿತ್ರದ ಮುಹೂರ್ತವಾಗಿತ್ತು. ಪುನೀತ್ ರಾಜಕುಮಾರ್ ಮುಹೂರ್ತಕ್ಕೆ ಬಂದು ಚಿತ್ರಕ್ಕೆ ಚಾಲನೆ ನೀಡಿ, ಶುಭ ಹಾರೈಸಿ ಹೋಗಿದ್ದರು. ಆದರೆ, ಕಾರಣಾಂತರಗಳಿಂದ ‘ಲವ್ ಬರ್ಡ್ಸ್’ ಹಾರಾಟ ಶುರು ಮಾಡಿರಲಿಲ್ಲ. ಈಗ ಮುಂದಿನ ಸೋಮವಾರದಿಂದ (ಮೇ 30) ಚಿತ್ರೀಕರಣ ಕೊನೆಗೂ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಆಶಿಕಾ ರಂಗನಾಥ್ ಬದಲು ಇದೀಗ ಮಿಲನಾ ನಾಗರಾಜ್ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಕೃಷ್ಣ ಮತ್ತು ಮಿಲನಾ ಈಗಾಗಲೇ ‘ಲವ್ ಮಾಕ್ಟೇಲ್’ ಮತ್ತು ಅದರ ಮುಂದುವರೆದ ಭಾಗದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈಗ ಪುನಃ ‘ಲವ್ ಬರ್ಡ್ಸ್’ ನಲ್ಲಿ ಜತೆಯಾಗಿ ನಟಿಸಲಿದ್ದಾರೆ. ಇಷ್ಟಕ್ಕೂ ಆಶಿಕಾ ರಂಗನಾಥ್ ಚಿತ್ರತಂಡದಿಂದ ಹೊರಹೋಗಿದ್ದು ಏಕೆ ಎಂಬ ಪ್ರಶ್ನೆ ಬರಬಹುದು. ಡೇಟ್ಸ್ ಸಮಸ್ಯೆ ಎನ್ನುತ್ತಾರೆ ನಿರ್ದೇಶಕ ಪಿ.ಸಿ. ಶೇಖರ್. ಅದರ ಜತೆಗೆ ಇನ್ನೊಂದು ಕಾರಣವನ್ನೂ ಕೊಡುತ್ತಾರೆ.

‘ಇದು ಪ್ರೇಮಿಗಳ ಕಥೆಯಲ್ಲ. ದಂಪತಿಯ ಕಥೆ. ಪ್ರೀತಿಸಿ ಮದುವೆಯಾದವರ ಕಥೆ. ಮದುವೆಯಾದ ಮೇಲಿನ ಪ್ರೀತಿಯ ಕಥೆ. ಹಿಂದೆಲ್ಲ ಹೆಂಡತಿಯು ಗಂಡನ ಮೇಲೆ ಹೆಚ್ಚು ಅವಲಂಬಿತವಾಗಬೇಕಿತ್ತು. ಆದರೆ, ಈಗ ಸಮಯ ಸಾಕಷ್ಟು ಬದಲಾಗಿದೆ. ಇದು ಆಧುನಿಕ ಗಂಡ-ಹೆಂಡತಿಯ ಕಥೆ. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ? ಅವರ ನೋವೇನು? ಅವರ ನಡುವಿನ ಬಂಧ ಹೇಗಿರುತ್ತದೆ? ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ಇದೊಂದು ಸುಂದರವಾದ ಪ್ರೇಮಕಥೆ. ಇದು ದಂಪತಿಯ ಕಥೆಯಾದ್ದರಿಂದ, ನಿಜಜೀವನದಲ್ಲೂ ಗಂಡ-ಹೆಂಡತಿಯಾಗಿದ್ದವರು ನಟಿಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದನಿಸಿತು.

ಹಾಗಾಗಿ, ಆಶಿಕಾ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾದ ಮೇಲೆ, ಮಿಲನಾ ಅವರನ್ನು ಕೇಳಿದೆ. ಅವರು ತಕ್ಷಣ ನಟಿಸುವುದಕ್ಕೆ ಒಪ್ಪಿಕೊಂಡರು’ ಎನ್ನುತ್ತಾರೆ ಶೇಖರ್. ‘ಲವ್ ಬರ್ಡ್ಸ್’ನಲ್ಲಿ ಕೃಷ್ಣ ಮತ್ತು ಮಿಲನಾ ಅಲ್ಲದೆ, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ವೀಣಾ ಸುಂದರ್ ಮುಂತಾದ ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣವಿದೆ. ‘ಕಡ್ಡಿಪುಡಿ’ ಚಂದ್ರು ಈ ಚಿತ್ರವನ್ನು ನಿರ್ವಿುಸುತ್ತಿದ್ದು, ಈಗಾಗಲೇ ಎಚ್​ಎಂಟಿ ಫ್ಯಾಕ್ಟರಿಯಲ್ಲಿ 18 ಸೆಟ್​ಗಳನ್ನು ನಿರ್ವಿುಸಲಾಗುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲೇ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net