

ಚೆನ್ನೈ: ಚಿತ್ರರಂಗದ ಸ್ಟಾರ್ ನಟರಿಗೆ ಸಾಮಾನ್ಯವಾಗಿ ಕ್ಲಾಸ್-ಮಾಸ್ ಸೇರಿ ಎಲ್ಲ ಥರದ ಅಭಿಮಾನಿಗಳೂ ಇರುತ್ತಾರೆ. ಕೆಲವರು ತಮ್ಮ ಅಭಿಮಾನವನ್ನು ಚಿತ್ರ-ವಿಚಿತ್ರವಾಗಿ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ಅವರ ಅಭಿಮಾನವನ್ನು ಇನ್ನೊಬ್ಬರ ಮೇಲೆ ಹೇರುವುದು ಕೂಡ ಇರುತ್ತದೆ.
ಅಂಥದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದ ಖ್ಯಾತ ನಟ, ಮುಖ್ಯಮಂತ್ರಿಯೂ ಆಗಿದ್ದ ಎಂ.ಜಿ. ರಾಮಚಂದ್ರನ್ ಅವರ ಅಪ್ಪಟ ಅಭಿಮಾನಿಯೇ ಇಂಥದ್ದೊಂದು ಪ್ರಕರಣದ ಕೇಂದ್ರಬಿಂದು.
ಎಂ.ಜಿ. ರಾಮಚಂದ್ರನ್ ಅವರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪೋಸ್ಟ್ ಕಾರ್ಡ್ ಮೂಲಕ ಈ ಬೆದರಿಕೆ ಒಡ್ಡಿದ್ದಾನೆ. ಕಳೆದ ಜ. 17ರಂದು ಎಂಜಿಆರ್ ಅವರ 105ನೇ ಜನ್ಮದಿನವಾಗಿತ್ತು. ಅಂದು ಅವರ ಸಿನಿಮಾದ ಹಾಡನ್ನು ರೇಡಿಯೋದಲ್ಲಿ ಪ್ರಸಾರ ಮಾಡಿಲ್ಲ ಎಂಬುದೇ ಈ ಅಭಿಮಾನಿಯ ಸಿಟ್ಟಿಗೆ ಕಾರಣ.
ಹೀಗಾಗಿ ಆತ ಪೋಸ್ಟ್ ಕಾರ್ಡ್ ಮೂಲಕ ಬೆದರಿಕೆ ಸಂದೇಶವನ್ನು ಕೊಯಮತ್ತೂರಿನ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ಗೆ ಕಳಿಸಿದ್ದು, ಅದು ಅಲ್ಲಿಗೆ ಗುರುವಾರ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮನಾಥಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆ ದಿನ ನೀವು ರಜನಿಕಾಂತ್ ಸಿನಿಮಾದ ಹಾಡು ಪ್ರಸಾರ ಮಾಡಿದ್ದೀರಿ, ಆದರೆ ಎಂಜಿಆರ್ ಜನ್ಮದಿನವಿದ್ದರೂ ಅವರ ಸಿನಿಮಾದ ಹಾಡು ಪ್ರಸಾರ ಮಾಡಿರಲಿಲ್ಲ. ಹೀಗಾಗಿ ನಿಮ್ಮ ರೇಡಿಯೋ ಸ್ಟೇಷನ್ಗೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಆತ ಪೋಸ್ಟ್ ಕಾರ್ಡ್ನಲ್ಲಿ ಬರೆದು ಕಳಿಸಿದ್ದಾನೆ. ದೂರು ಸ್ವೀಕರಿಸಿರುವ ಪೊಲೀಸರು ಪೋಸ್ಟ್ ಕಾರ್ಡ್ ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದು, ರೇಡಿಯೋ ಸ್ಟೇಷನ್ಗೆ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಿದ್ದಾರೆ.